Monday, January 9, 2017



ಐಸಲೇ ಕುಮಾರವ್ಯಾಸ!                           --
ಉದ್ಯೋ ೧-೨೧
ಪಾಂಡವರು ಕೌರವರಿಗೆ ಯುದ್ಧ ನಿಶ್ಚಿತವಾದ ಹಿನ್ನೆಲೆಯಲ್ಲಿ ಎರಡು ಕಡೆಯವರೂ ಸೇನಾಬಲದ ಸಂಗ್ರಹಕ್ಕಾಗಿ ಎಲ್ಲಾ ಮಿತ್ರ ರಾಜರುಗಳಿಗೆ ಕರೆ ಕಳಿಸುತ್ತಾರೆ. ಕೆಲ ದಿನಗಳ ಕಾಲ ಅಪಾರ ರಾಜರುಗಳ, ಸೈನ್ಯದ  ಚಲನೆ ಆರಂಭ. ಕೆಲವರು ಪಾಂಡವರ ಪಾಳೆಯಕ್ಕೆ; ಕೆಲವರು ಕೌರವರ ಪಾಳೆಯಕ್ಕೆ.


ಅಸೂಯೆಯಿಂದ ಪಾಂಡವರ ಸೈನ್ಯದ ಜಮಾವಣೆಯನ್ನು ಗಮನಿಸುತ್ತಿದ್ದ ದುರ್ಯೋಧನ ಉಪಾಯವಾಗಿ ಬಲಾಢ್ಯವಾದ ಯಾದವ ಸೈನ್ಯ,ಹಾಗೂ ಶ್ರೀಕೃಷ್ಣನ ಸಹಕಾರ ಸಂಪಾದಿಸಲು ಹೊರಬಿದ್ದ.ಈ ಸುದ್ದಿಯನ್ನು ಅರಿತ ಯುಧಿಷ್ಥಿರ ಅರ್ಜುನನನ್ನು ದ್ವಾರಕೆಗೆ ಕಳಿಸಿದ .ಇಬ್ಬರೂ ಏಕಕಾಲಕ್ಕೆ ಶ್ರೀಕೃಷ್ಣನನ್ನು ಸಂಧಿಸುವಂತಾಗುತ್ತದೆ.ಅದರ ಸೊಗಸು ಮುಂದೆ!

ದ್ವಾರಕೆಗೆ ಬಂದಿಳಿದ ಅರ್ಜುನನ ಮನಃಸ್ಥಿತಿ ಅದನ್ನು ವರ್ಣಿಸುವ ಕುಮಾರವ್ಯಾಸನ ಮನಃಸ್ಥಿತಿ ಎರಡೂ ಭಕ್ತಿರಸದಲ್ಲಿ ಮುಳುಗಿ ಹೋಗಿವೆ. ದ್ವಾರಕೆ ಶ್ರೀಕೃಷ್ಣ ಬೆಳೆದ, ನಡೆದಾಡಿದ ಪುಣ್ಯಸ್ಥಳ! ಅಲ್ಲಿನ ಒಂದೊಂದು ಅಂಗುಲವೂ ಅತ್ಯಂತ ಪಾವನ! ಅಂಥಾ ಮಹಾಮಹಿಮನನ್ನು ಧರಿಸಿದ , ಅವನ ಎಲ್ಲಾ ಲೀಲೆಗಳಿಗೆ ಸಾಕ್ಷಿಯಾದ ದ್ವಾರಕೆಯ ನೆಲ, ವಾತಾವರಣ, ಸಾಮಾನ್ಯವೆ? ಅರ್ಜುನ ಪುಳಕಗೊಳ್ಳುತ್ತಾನೆ.  ಕುಮಾರವ್ಯಾಸ ಸಹ ಆ  ಪುಳಕವನ್ನು ಅನುಭವಿಸಿ ಹಾಡುತ್ತಾನೆ. ಭಕ್ತರಿಗೆ ಅದ್ಭುತ ಸಂಚಲನವನ್ನುಉಂಟು ಮಾಡುವ   ಪದ್ಯಗಳು ಹೊಮ್ಮುತ್ತವೆ!

‘ಅಟ್ಟಿಬಳಲಿದ ಶ್ರುತಿಗೆ ಹರಿ ಮೈಗೊಟ್ಟ ಠಾವಿದು,
ತಾಪಸರು ಜಪಗುಟ್ಟಿ ಜಿನುಗಿದಡೆ,
ಅವರನುಜ್ಜೀವಿಸಿದ ಠಾವಿದಲಾ!
ಹುಟ್ಟು ಸಾವಿನ ವಿಲಗ ಜೀವರ ಬಿಟ್ಟ ಠಾವಿದು,
ಕಾಲ ಕರ್ಮದ ಥಟ್ಟು ಮುರಿವಡೆದು ಓಡಿದೆಡೆಯಿದು,
ಶಿವ ಶಿವಾ ಎಂದ!

(ಶ್ರುತಿ-ವೇದಗಳು; ಉಜ್ಜೀವಿಸು- ಸಲಹು,ಕಾಪಾಡು; ಠಾವು- ಸ್ಥಳ; ವಿಲಗ-ಜಂಜಾಟ; ಥಟ್ಟು- ಸೈನ್ಯ;)


ನಾಲ್ಕು ಸುಂದರ ವಾಕ್ಯಗಳು! ರೂಪಕದ ಸುಳುಹೇ ಕಾಣದಂತೆ ಅಭಿನಯಿಸುತ್ತಿರುವ ಅದ್ಭುತವಾದ ರೂಪಕಗಳು! ಕುಮಾರವ್ಯಾಸ ಭಕ್ತಿಪರವಶತೆಯಲ್ಲಿ ಮಾಡುವ ಮೋಡಿ! ಒಂದೊಂದು ಉದ್ಗಾರವನ್ನೂ ಪ್ರತ್ಯೇಕವಾಗಿ ಅರಿತು ಆನಂದಿಸಬೇಕು!

‘ಅಟ್ಟಿಬಳಲಿದ ಶ್ರುತಿಗೆ ಹರಿ ಮೈಗೊಟ್ಟ ಠಾವಿದು,
ವೇದಗಳ ಸತತ ಪ್ರಯತ್ನ ಪರಮಾತ್ಮನ ಅನ್ವೇಷಣೆ ತಾನೆ? ಅವನ ಸ್ವರೂಪವನ್ನು ಅರಿಯುವುದು, ವರ್ಣಿಸುವುದು ಅವುಗಳ ಕಾಯಕ.ಆದರೆ ಅವನು ಶ್ರುತಿಗಳ ಗ್ರಹಿಕೆಗೆ ಸಿಗುತ್ತಾನೇನು? ಹೇಳಲು ಬರುವುದಿಲ್ಲ.’ ನಿಗಮಕೆ ಸಿಲುಕದ..’ ಶ್ರುತಿಗೆ ನಿಲುಕದ…’ ಮಹಾಮಹಿಮ ಎಂಬುದನ್ನು ಕೇಳಿದ್ದೇವೆ.

ಮಕ್ಕಳೊಡನೆ ದೊಡ್ಡವರೂ ಒಮ್ಮೊಮ್ಮೆ ಪರಸ್ಪರ ಹಿಡಿಯುವ ಆಟ ಆಡುತ್ತೇವೆ ಅಲ್ಲವೇ? ನಮಗೆ ಗೊತ್ತು, ಮಕ್ಕಳಿಗೆ ನಮ್ಮನ್ನು ಹಿಡಿಯಲಾಗುವುದಿಲ್ಲ. ಆದರೆ ಮಕ್ಕಳನ್ನು ನೋಯಿಸುವ ಇಚ್ಛೆ ಇಲ್ಲದೆ ಒಮ್ಮೊಮ್ಮೆ ನಾವು ಸೋತಂತೆ ನಟಿಸಿ ಸಿಕ್ಕಿಕೊಳ್ಳುತ್ತೇವೆ.ಕವಿ ಕೇಳುತ್ತಾನೆ; ಹರಿ ಇಲ್ಲಿ ಮಾಡಿದ್ದೂ ಅದನ್ನೆ!

ಶ್ರುತಿಗಳು ಅವನನ್ನು ಅಟ್ಟಿಸಿಕೊಂಡು ಹೋಗುತ್ತಲೇ ಇದ್ದರೂ ಸಿಗದವನು ಇಲ್ಲಿ ತಾನಾಗಿ ಮೈಗೊಟ್ಟು ಸಿಕ್ಕಿದ.  ಅಂದರೆ ಆ ನಾರಾಯಣ ಕೃಪೆ ಮಾಡಿ ಹುಟ್ಟಿ ತನ್ನ ಸ್ವರೂಪ, ಮಹಿಮೆಯನ್ನು ಅರಿಯಲು ಶ್ರುತಿಗಳಿಗೆ ಅವಕಾಶ ಒದಗಿಸಿದ  ಪುಣ್ಯ ಭೂಮಿ! ಶ್ರುತಿಗಳ ಹಂಬಲ ತೀರಿಸಿದ ಸ್ಥಳ!

 ತಾಪಸರು ಜಪಗುಟ್ಟಿ ಜಿನುಗಿದಡೆ, ಅವರನುಜ್ಜೀವಿಸಿದ ಠಾವಿದಲಾ!
ಶ್ರುತಿಯ ಮಾತಾಯಿತು. ಇನ್ನು ತಪಸ್ವಿಗಳು? ಹರಿಯ ದರ್ಶನ, ಅನುಗ್ರಹಕ್ಕಾಗಿ ಸದಾ ಜಪಯೋಗದಲ್ಲಿ ಮುಳುಗಿ ಅದರಲ್ಲೇ ಕರಗಿದವರನ್ನು ಅನುಗ್ರಹಿಸಿದ ಪುಣ್ಯಧಾಮ ಇದು.ಯಾವ ಹರಿಯನ್ನು ಅವರು ನೋಡಬಯಸುತ್ತಾರೋ ಅವನು ಇಲ್ಲಿ ಓಡಾಡಿಕೊಂಡಿದ್ದಾನೆ! ಅವನ ಸಾಕ್ಷಾತ್ ದರ್ಶನ, ಅಮೃತವಾಣಿ,ಲೀಲಾಪ್ರಸಂಗಗಳು ನಿತ್ಯವೂ ಲಭ್ಯವಿರುವ ಅದೃಷ್ಟದ ನೆಲೆ!ತಪಸ್ವಿಗಳಿಗೆ ಇದೇ ಉಧ್ಧಾರವಲ್ಲವೆ?

ಹುಟ್ಟು ಸಾವಿನ ವಿಲಗ ಜೀವರ ಬಿಟ್ಟ ಠಾವಿದು,
ಜಗತ್ತಿನಲ್ಲಿ ಹುಟ್ಟುವ ಜೀವಿಗೆ ಮರಣದ ಕುಣಿಕೆ, ಮರುಹುಟ್ಟು ಇವನ್ನೊಳಗೊಂಡ ಸುಳಿ ಇದ್ದದ್ದೇ. ಪುನರಪಿ ಜನನಂ, ಪುನರಪಿ ಮರಣಂ. ಇದು ಎಲ್ಲರಿಗೂ ಅನಿವಾರ್ಯ. ಕವಿ ಹೇಳುತ್ತಾನೆ;ಈ ಜಂಜಡ ಜೀವಿಗಳನ್ನು ಬಿಟ್ಟು ಹೋದ ಸ್ಥಳ ಇದು! ಸಾಕ್ಷಾತ್ ನಾರಾಯಣನ ಆಡುಂಬೊಲವಾದ ದ್ವಾರಕೆಯಲ್ಲಿ ನಿತ್ಯ ಹರಿಯನ್ನು ಕಾಣುವ ಸುಯೋಗ ಇರುವವರಿಗೆ ಹುಟ್ಟು ಸಾವಿನ ಆತಂಕ ಎಲ್ಲಿಯದು? ಇದಕ್ಕಿಂಥಾ ಮೋಕ್ಷಕಾರಣ ಎಲ್ಲಿದೆ?


 ಕಾಲ ಕರ್ಮದ ಥಟ್ಟು ಮುರಿವಡೆದು ಓಡಿದೆಡೆಯಿದು,
ಅಜೇಯವಾದ, ಸೋಲರಿಯದ ಸೈನ್ಯವೊಂದು ಸೋತು ದಿಕ್ಕಾಪಾಲಾಗಿ ಓಡಿಹೋಗುವ ಚಿತ್ರ ಈ ರೂಪಕದ ಸಾಲುಗಳಲ್ಲಿದೆ! 

ಕಾಲ,ಕರ್ಮದ ಸೈನ್ಯ ಅದು. ಜೀವಿಗಳನ್ನು ಎಡಬಿಡದೆ ಸೋಲಿಸುತ್ತಿರುವ ಎರಡು ಶಕ್ತಿಗಳು ಸದಾ ಓಡುತ್ತಿರುವ ಕಾಲ ಹಾಗೂ ತನ್ನ ಬಂಧನದಲ್ಲಿ ಜೀವಿಯನ್ನು ಸಿಕ್ಕಿಸಿ ಸಂಸಾರದ ವರ್ತುಲದಲ್ಲಿ ಸದಾ ತಿರುಗುತ್ತಲೇ ಇರುವಂತೆ ಮಾಡುವ ಕರ್ಮ! ಇವೆರಡೂ,ಜೀವಿಗಳ ಮೇಲೆ ನಿರಂತರವಾಗಿ ಧಾಳಿ ಮಾಡುತ್ತಾ ಅಜೇಯವಾಗಿವೆ, ದುರ್ದಮ್ಯವಾಗಿವೆ. ಆದರೆ ದ್ವಾರಕೆಯಲ್ಲಿ? ಈ ಕಾಲ ಹಾಗೂ ಕರ್ಮಗಳ ಸೈನ್ಯ ಸೋತು ಸುಣ್ಣವಾಗಿದ್ದಷ್ಟೇ ಅಲ್ಲ; ಛಿಂದಿಯಾಗಿ ಓಡಿ ಹೋಗಿವೆ!

ಶ್ರೀಕೃಷ್ಣನಿರುವ ಸ್ಥಳದಲ್ಲಿರುವವರಿಗೆ ಕಾಲ ಕರ್ಮದ ಬಂಧನ ಎಲ್ಲಿಯದು? ಅವನ ಕ್ಷಣದ ಕಟಾಕ್ಷವೇ ಇವೆಲ್ಲದರಿಂದ ಬಿಡುಗಡೆ ಕೊಡಬಲ್ಲದು. ಹಾಗಿರುವಾಗ   ಅವನೊಂದಿಗೇ ವಾಸಿಸುವವರಿಗೆ?

ಹರಿಯ ಸಾನ್ನಿಧ್ಯದಿಂದ ತುಂಬಿ ನಿಂತ ದ್ವಾರಕೆಯ ಪಾವನತೆಯನ್ನು ಅರ್ಜುನ ಅನುಭವಿಸಿದ್ದು ಹೀಗೆ. ನಾರಾಯಣನ ಪರಮ ಭಕ್ತನಾದ ಕುಮಾರವ್ಯಾಸನಿಗೆ ದ್ವಾರಕೆಯನ್ನು ವರ್ಣಿಸುವ ಅವಕಾಶ ಸಿಕ್ಕಿದರೆ? ಅನನ್ಯ ಭಕ್ತಿಭಾವದ, ಕಾವ್ಯಶಕ್ತಿಯ ಅನಾವರಣವಾಗುತ್ತದೆ! ನಾಲ್ಕೈದು ಶಬ್ದಗಳಲ್ಲಿ ಅಗಾಧ ಅರ್ಥ ಹೊಮ್ಮಿಸುವ ರೂಪಕ ಪರಂಪರೆಗಳು ಸೃಷ್ಟಿಯಾಗುತ್ತವೆ!

ಕುಮಾರವ್ಯಾಸ ಪ್ರತಿಷ್ಠಾನ
೯/೧/೨೦೧೭


No comments:

Post a Comment