Sunday, January 1, 2017



ಐಸಲೇ ಕುಮಾರವ್ಯಾಸ!                           -೬೩-
ಕರ್ಣ ಪ ೨೫-೪೪
ಸರ್ಪಾಸ್ತ್ರದ ಸಂದರ್ಭ ಅನೇಕ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತದೆ.

ಕರ್ಣನಿಗೆ ಆಶ್ಚರ್ಯ! ಸಾಮಾನ್ಯವಾಗಿ ಹೂಡಿದ ಬಾಣಗಳು ಅಲ್ಲಿಯೇ ಚುಚ್ಚಿಕೊಳ್ಳುತ್ತವೆ. ಆದರೆ ಮರಳಿ ಬಂದು ತೊಡುವಂತೆ ಬೇಡುತ್ತಿದೆ! ನನಗಿಂತಲೂ ಹೆಚ್ಚಿನ ಉತ್ಸಾಹ ತೋರಿಸುತ್ತಿದೆ!

ಯಾರು ನೀನು? ಎಂದ .ಬಾಣ ಹೇಳಿತು ,’ನಾನು ಅಶ್ವಸೇನ ಎಂಬ ಸರ್ಪ.ದೇವೇಂದ್ರನ ಖಾಂಡವ ವನದಲ್ಲಿದ್ದೆ.ಅದನ್ನು ಸುಡುವ ಸಂದರ್ಭದಲ್ಲಿ ನನ್ನನ್ನು ಅರೆಜೀವ ಮಾಡಿದ ಈ ಅರ್ಜುನ. ಅದಕ್ಕಾಗಿ ಇಷ್ಟು ದಿನ ಕಾಯುತ್ತಿದ್ದೆ. ಈಗ ಅವಕಾಶ ದೊರೆತಿದೆ. ಬೇಗ ತೊಡು, ಈ ದುರಾತ್ಮಕನ ತಲೆಯನ್ನು ತರಿದು ಹಾಕುತ್ತೇನೆ’

ಕರ್ಣ ನಿರಾಕರಿಸಿದ. ಬೇರೆಯವರ ಮರೆಯಲ್ಲಿ ಶತ್ರುವನ್ನು ಕೊಲ್ಲುವ ಅನಿವಾರ್ಯ ನನಗಿಲ್ಲ.ಹೋಗು ಎಂದ.ಶಲ್ಯ ಸಹಾ ಕರ್ಣನನ್ನು ಒತ್ತಾಯಿಸಿ ಒಲ್ಲೆ ಎಂದದ್ದಕ್ಕೆ ಮುನಿದು ರಥದಿಂದ ಇಳಿದು ಹೋದ.

ಈ ಎಲ್ಲದರ ನಡುವೆ ಮತ್ತೊಂದು  ಬೆಳವಣಿಗೆ!  ಸರ್ಪಾಸ್ತ್ರ ಯೋಚಿಸಿತು. ಈ ಕರ್ಣನನ್ನು ಅಂಡಲೆದು ಫಲವಿಲ್ಲ. ನನ್ನ ಸ್ವಸಾಮರ್ಥ್ಯದಿಂದ ನಾನೇ ನುಗ್ಗುತ್ತೇನೆ. ಬಾಣ ಉಗ್ರರೂಪನ್ನು ಧರಿಸಿ ಪುನಃ ಅರ್ಜುನನೆಡೆಗೆ ನುಗ್ಗಿತು! ಕೃಷ್ಣ ಅರ್ಜುನನಿಗೆ ಸೂಚನೆ ನೀಡಿದ;

ಇವನ ಬಲ್ಲೈ ಪಾರ್ಥ?
ಚಕ್ಷುಶ್ರವನಿವನು, ತಕ್ಷಕನ ಮಗ
ಖಾಂಡವದ ಬೇಳಂಬದಲಿ ಬದುಕಿದ ತಲೆಯೊಳಡಹಾಯ್ದು,
ಇವನ ಮೂಡಿಗೆಯೊಳಗೆ ಶರವಾಯ್ತು,
ಇವನು ತಾನೇ ಮರಳಿದನು
ನೀನವಧರಿಸಿಕೊಳ್ಳೆನುತ ನುಡಿದನು ದೈತ್ಯರಿಪು ನಗುತ

(ಬೇಳಂಬ-ದಹನ;ಮೂಡಿಗೆ-ಬತ್ತಳಿಕೆ, ಶರ-ಬಾಣ; ಚಕ್ಷುಶ್ರವ-ಸರ್ಪ)

ಅರ್ಥಃ ‘ಇವನನ್ನು ಗುರ್ತಿಸಿದೆಯಾ ಅರ್ಜುನ? ಇವನು ಸರ್ಪಗಳೊಡೆಯ ತಕ್ಷಕನ ಮಗ. ಖಾಂಡವ ದಹನದ ಸಂದರ್ಭ ನಾನು,ನೀನು ಸೇರಿ ಅರಣ್ಯವನ್ನು ಅಗ್ನಿಗೆ ಆಹುತಿ ಮಾಡಿದಾಗ ದೇಹ ಸುಟ್ಟಿತಾದರೂ ತಲೆಯನ್ನು ಉಳಿಸಿಕೊಂಡು ಹೋಗಿದ್ದವನು ಈಗ ಕರ್ಣನ ಬತ್ತಳಿಕೆಯಲ್ಲಿ ಬಾಣವಾಗಿದ್ದ. ಈಗ ತಾನಾಗಿಯೇ ಬರುತ್ತಿದ್ದಾನೆ. ಇವನನ್ನು ನೀನೇ ನೋಡಿಕೋ’


ಅರ್ಜುನ ಮರೆತಿದ್ದಿರಬಹುದು. ಆದರೆ ಶ್ರೀ ಕೃಷ್ಣನಿಗೆ ನೆನಪಿದೆ ಅರೆಜೀವವಾಗಿ ಹಾರಿಹೋಗಿದ್ದ ಸರ್ಪದ ಇತಿಹಾಸ! ಅದೇ ಅಲ್ಲವೇ ಸಮರ್ಥ ಸಾರಥಿಯಾಗಿ, ಹಿತೈಷಿಯಾಗಿ ಕೃಷ್ಣನ ಜಾಣ್ಮೆ,ಕೊಡುಗೆ? ಇಂಥಾ ಅಗಾಧ ಜ್ಞಾನ,
ಅನುಭವಕ್ಕಾಗಿಯೆ ತಾನೆ ಅರ್ಜುನ ಅಕ್ಷೋಹಿಣಿ ಸೈನ್ಯವನ್ನು ಬದಿಗಿಟ್ಟು ಕೃಷ್ಣನನ್ನು ಆಯ್ಕೆ ಮಾಡಿಕೊಂಡದ್ದು?

ಮತ್ತೊಂದು ಗಮನಿಸಬೇಕಾದ ಅಂಶ. ಬಾಣದ ಅಬ್ಬರವನ್ನು 
ರಥವನ್ನೇ ತಗ್ಗಿಸಿ ಪರಿಹಾರ ಮಾಡಿದ ಕೃಷ್ಣ ಈಗ ನೀನೇ ನೋಡಿಕೋ ಎನ್ನುತ್ತಿದ್ದಾನೆ.ಆಶ್ಚರ್ಯ ಅನ್ನಿಸುತ್ತದೆ ಅಲ್ಲವೇ?
ಅದಕ್ಕೆ ಕುಮಾರವ್ಯಾಸ ಮುಂದಿನ ಪದ್ಯದಲ್ಲಿ ಸಮರ್ಥನೆ ನೀಡುತ್ತಾನೆ.

ಸರ್ಪಗಳ ದ್ವೇಷ ಹನ್ನೆರಡು ವರ್ಷ ಎಂಬ ಜನಜನಿತ ನಂಬಿಕೆಗೆ ಈ ಘಟನೆ ಪೋಷಣೆ ಕೊಟ್ಟಿರಲೂಬಹುದು. ಒಂದೇ ಪದ್ಯದಲ್ಲಿ ಸರ್ಪದ ಇತಿಹಾಸವನ್ನು ಅರ್ಜುನನಿಗೆ ಸಂಗ್ರಹವಾಗಿ ತಿಳಿಸುವ ಈ ಪದ್ಯದ ಸಂಭಾಷಣಾ ಶೈಲಿ ಸಹಾ ವಿಶಿಷ್ಟವಾಗಿದ್ದು ಮನಸೆಳೆಯುತ್ತದೆ.

  
ಕುಮಾರವ್ಯಾಸ ಪ್ರತಿಷ್ಠಾನ
೦೧/೦೧/೨೦೧೭ಥವನ್ನು ತಗ್ಗಿಸಿ ಪರಿಹಾರ ಮಾಅಣದ್ದಕ್ಕಾಗಿಯೆ ತಾನೆ ಅರ್ಜುನ ಅಕ್ಷೋಹಿಣಿ ಸೈನ್ಯವನ್ನು ಬದಿಗಿಟ್ಟು ಕೃಷ್ಣನನ್ನು ಆಯ್ಕೆ ಮಾಕೊಂದದ್ದು

No comments:

Post a Comment