Wednesday, January 11, 2017



ಐಸಲೇ ಕುಮಾರವ್ಯಾಸ!                           --
ಉದ್ಯೋಗ ಪ ೨-೨೮

ಇಂದುಕುಮಾರವ್ಯಾಸ ಜಯಂತಿ!

ಕನ್ನಡ ನುಡಿಯನ್ನು ವಿವಿಧ ಭಾವ ಭಂಗಿಗಳಲ್ಲಿ ಕುಣಿಸಿ  ಭಾಷೆಯ ಎಲ್ಲ ಸಾಧ್ಯತೆಗಳನ್ನೂ ಪ್ರಕಟಗೊಳಿಸಿ, ಶಬ್ದ ಭಂಡಾರವನ್ನು ಸೃಜಿಸಿ ,ಬಳಸಿ ಕನ್ನಡ ಸಾಹಿತ್ಯದ ಮೈಲಿಗಲ್ಲಾದ ಮಹಾಕವಿ ಕುಮಾರವ್ಯಾಸನಿಗೆ ನಮ್ಮೆಲ್ಲರ ನಮನ.
ಅವನ ವಾಕ್ಪ್ರತಿಭೆಗೆ ಸಾಕ್ಷಿಯಾದ ಒಂದು ಸುಂದರ ಪದ್ಯ!

ಮನೆಗೆ ಬಂದ ದುರ್ಯೋಧನ, ಅರ್ಜುನ ಇಬ್ಬರನ್ನೂ ಉಚಿತವಾಗಿ ಬರಮಾಡಿಕೊಂಡ ಶ್ರೀಕೃಷ್ಣ ‘ಕಡು ಮಾನ್ಯರೆಮ್ಮೀ ಆಲಯಕೆ ಬರಲೇನು?( ಅತ್ಯಂತ ಶ್ರೇಷ್ಠ ವ್ಯಕ್ತಿಗಳು ನಮ್ಮ ಮನೆಗೆ ಬಂದ ಕಾರಣ?) ಎಂದು ಕೇಳಿದ.

ದುರ್ಯೋಧನ ಯುದ್ಧ ನಿರ್ಣಯವಾದ ವಿಷಯವನ್ನು ಹೇಳಿ ಯುದ್ಧಕ್ಕಾಗಿ ಸಹಾಯ ಕೇಳಲು ಬಂದೆ ಎಂದ.

ಯುದ್ಧ ಯಾರಿಗಾದರೂ ಸಂತೊಷ ತರುವ ವಿಷಯವಲ್ಲ (ಭೂಭಾರ ಹರಣದಮಾತು ಆಮೇಲೆ).
ಹಿರಿಯನಾಗಿ, ಪರಮ ವೀರನಾಗಿ,ಹಿತೈಷಿಯಾಗಿ ಹರಿ ದುರ್ಯೋಧನನಿಗೆ ಹೇಳುವ ಮಾರ್ಮಿಕವಾದ ಮಾತುಗಳನ್ನು ಗಮನಿಸಿ. ಯವ ಕಾಲಕ್ಕೂ ಮರೆಯಲಾಗದ ಹಿತವಚನ ಕುಮಾರವ್ಯಾಸನ ಸವಿಯಾದ ಕನ್ನಡದಲ್ಲಿ

ಕೌರವೇಶ್ವರ ಕೇಳು,
ಧರಣೀ ನಾರಿ ಅನಿಬರಿಗೊಕ್ಕತನವಿದ್ದು,
ಆರ ಮೆಚ್ಚಿದಳು, ಆರಸಂಗಡ ಉರಿಯ ಹಾಯಿದಳು?                                                                                      
ಭೂರಿ ಮಮಕಾರದಲಿ ನೃಪರು ವಿಚಾರಿಸದೆ
ಧರೆ ತಮ್ಮದೆಂದೇ
ನಾರಕದ ಸಾಮ್ರಾಜ್ಯಕೈದುವರೆಂದು ಹರಿ ನುಡಿದ..,’

(ಒಕ್ಕತನ- ಸಂಸಾರ ಮಾಡುವಿಕೆ; ಉರಿಯ ಹಾಯು- ಸಹಗಮನ ಮಾಡು;ಭೂರಿ- ಹೆಚ್ಚಿನ; ಐದು-ಹೋಗು)

‘ದುರ್ಯೋಧನಾ ಕೇಳು,
ಭೂಮಿಯೆಂಬ ಹೆಣ್ಣು ಹಲವಾರು ರಾಯರೊಂದಿಗೆ ಸಂಸಾರಮಾಡಿದ್ದಾಳೆ .( ಹಲವಾರು ಚಕ್ರವರ್ತಿಗಳು ಇವಳನ್ನಾಳಿದ್ದಾರೆ) ಆದರೆ ಯಾರನ್ನಾದರೂ ಮೆಚ್ಚಿದಳೇನು? ಯಾರ ಸಂಗಡವಾದರೂ ಸಹಗಮನ ಮಾಡಿದಳೇನು? (ಸತ್ತ ಪತಿಯ ಸಂಗಡ ಹೆಂಡತಿಸಹಗಮನ ಮಾಡುವುದು ಅಂದು ಒಂದು ಮೌಲ್ಯವಾಗಿತ್ತು)

ನಾವು ಆಳುತ್ತಿರುವ ಭೂಮಿ ಶಾಶ್ವತವಾಗಿ ನಮ್ಮದೇ ಎಂಬ ವಿಕೃತ ಮಮಕಾರದಿಂದಾಗಿ ಸರಿಯಾದ ವಿಚಾರ ಮಾಡದೆ ವರ್ತಿಸುವ ರಾಜರುಗಳು ಸುಮ್ಮನೆ ನರಕಕ್ಕೆ ಬೀಳುತ್ತಾರೆ’


ಯುದ್ಧಕಾತರರಿಗೆ ಇಷ್ಟವಾಗುತ್ತದೋ ಇಲ್ಲವೋ ಆ ಮಾತು ಬೇರೆ .ತನ್ನನ್ನು ಹುಡುಕಿ ಬಂದವರಿಗೆ ಹಿರಿಯನಾಗಿ ಉಚಿತವಾದ ವಿವೇಕ ಹೇಳಬೇಕಾದದ್ದು ಕೃಷ್ಣನ ಕರ್ತವ್ಯ. ಅದನ್ನು ಅತ್ಯಂತ ಪರಿಣಾಮಕಾರಿ ಮಾತುಗಳಲ್ಲಿ ಹೇಳಿದ.

ಈ ವಾಕ್ಯಗಳಿಗೆ ವ್ಯಾಖ್ಯಾನದ ಅಗತ್ಯವಿಲ್ಲ.ಅಂಥಾ ತೂಕವಾದ ವಿಚಾರಗಳಿಗೆ ಅನುಗುಣವಾದ ಹದವಾದ ಮಾತುಗಳು ಕುಮಾರವ್ಯಾಸನವು.


ಕುಮಾರವ್ಯಾಸ ಪ್ರತಿಷ್ಠಾನ
೧೧/೧/೨೦೧೭

No comments:

Post a Comment