Tuesday, January 24, 2017



ಐಸಲೇ ಕುಮಾರವ್ಯಾಸ!     -೭೦-

ಉದ್ಯೋ -೪೩

ಸೈನ್ಯಸಹಾಯವನ್ನು ಶ್ರೀಕೃಷ್ಣನಿಂದ ಪಡೆದ ದುರ್ಯೋಧನ ಸಮಾಧಾನಗೊಂಡು ಕೃತವರ್ಮ, ಬಲರಾಮ ಇವರನ್ನು ಭೆಟ್ಟಿಯಾಗಿ ಯಾದವ ಸೈನ್ಯದೊಂದಿಗೆ ಹಿಂದಿರುಗಿದ.

ಶ್ರೀಕೃಷ್ಣ ಅರ್ಜುನನನ್ನು ಗೇಲಿ ಮಾಡುತ್ತಾ ಕೇಳಿದ ‘ಕತ್ತಿಯನ್ನು ಎಸೆದು ಕೇವಲ ಒರೆಯನ್ನು ಹಿಡಿದವನ ಹಾಗೆ ನೀನು ಸೈನ್ಯವನ್ನು ಬಿಟ್ಟು ‘ಕಾದದ ಕಟ್ಟದ’ ನನ್ನನ್ನು ಬಯಸಿ ತಪ್ಪು ಮಾಡಿದೆ. ನಿನ್ನ ಮೂರ್ಖತನದ ಆಯ್ಕೆಯನ್ನು ನಿನ್ನ ಸೋದರರು ಒಪ್ಪಿಯಾರೆ?’ ಅರ್ಜುನ ನಗುತ್ತಾ ಹೇಳಿದ; ‘ಕೃಷ್ಣಾ, ನಿನ್ನ ಮಾತಿನ ಇಂದ್ರಜಾಲ ನನ್ನ ಬಳಿಯೆ? ನಿನ್ನ ಗರಡಿಯಲ್ಲಿ ನುರಿತವನು ನಾನು. ನನ್ನ ಸೋದರರ ಆಯ್ಕೆ ಬೇರೆಯಾಗಲು ಹೇಗೆ ಸಾಧ್ಯ?’

‘ಅದೇನೋ ಸರಿ’ ಶ್ರೀಕೃಷ್ಣ ಕೇಳಿದ, ‘ ಈಗ ಮುಖ್ಯ ಸಮಸ್ಯೆ,ನನ್ನ ಪಾತ್ರವೇನು?

 ಕುಮಾರವ್ಯಾಸನ ಬಹಳ ಪ್ರಸಿದ್ಧವಾದ ಸಂಭಾಷಣೆಯ ಪದ್ಯಃ

ನಾವು ಬರಿಗೈಯವರು
ಬರಲೆಮಗಾವುದಲ್ಲಿಯ ಕೆಲಸ?
ಉಂಡುಂಡಾವು ಕುಳ್ಳಿಹರಲ್ಲ,
ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿಲ್ಲ ಆವು ಬಲ್ಲೆವು
ಬಂದು ಮಾಡುವುದೇನು ಹೇಳೆಂದ..,’

(ಹಂಗು-ಹೊರೆ,ಋಣ; ಲವ- ಸ್ವಲ್ಪ; )

‘ಅರ್ಜುನಾ, ನಾನು ಬರಿಕೈಯವನು (ಶಸ್ತ್ರ ಹಿಡಿದು ಹೋರಾಡುವವನಲ್ಲ), ನನಗೆ ಅಲ್ಲಿ ಕೆಲಸವಾದರೂ ಏನು ಹೇಳು? ನೀವೆಲ್ಲರೂ ಭಯಂಕರವಾದ ಮಹಾಯುದ್ಧದಲ್ಲಿ ಮುಳುಗಿರುವಾಗ ನಾನು ಉಂಡುಂಡು ಕುಳಿತಿರುವುದು ಸರಿಯಲ್ಲ; ನಾನು ನಿಮಗೆ ಹೊರೆಯಾಗುವುದೂ ಇಷ್ಟವಿಲ್ಲ. ನೀವೆಲ್ಲರೂ ನಾನು ದೇವರು ಎಂದು ಭಾವಿಸಿದ್ದೀರಿ ಆದರೆ ನನಗೆ ಗೊತ್ತು, ನನ್ನಲ್ಲಿ ಯಾವ ದೈವತ್ವವೂ ಇಲ್ಲ. ಹೇಳು, ನಾನು ಬಂದು ಮಾಡುವುದಾದರೂ ಏನು?

ಬರಿಕೈ ಅತಿಥಿಗೆ ಯಾವ ಮನ್ನಣೆ, ಗೌರವ ಇರುವುದಿಲ್ಲ. ಅದು ಲೋಕ ರೂಢಿ. ಅದೂ ಯುದ್ಧ ನಡೆಯುವ ಕಡೆ ಹೊರೆಯಾಗಿರುವುದೆ?

ಶ್ರೀಕೃಷ್ಣನ ಲೋಕಸಹಜವಾದ ಧಾಟಿಯ ಮಾತಿನಲ್ಲಿ ನಿರಹಂಕಾರ, ಗಾಂಭೀರ್ಯವೂ  ಇದೆ ತುಸು ಪರಿಹಾಸ್ಯದ ಎಳೆಯೂ ಇದೆ. ನಮ್ಮ ನಿಮ್ಮ ಜೀವನದಲ್ಲಿ ಯಾರಾದರೂ ಹಿರಿಯರು ಆಡುವ ಹಿತನುಡಿಯಂತೆ ಆತ್ಮೀಯವಾಗಿದೆಯಲ್ಲವೆ?

ಅರ್ಜುನ ಹರಿಯನ್ನು ಚೆನ್ನಾಗಿ ಬಲ್ಲವ. ನಮಸ್ಕರಿಸಿ ಹೇಳಿದ; ‘ನೀನು ದೇವನಷ್ಟೇ ಅಲ್ಲ, ದೇವರ ದೇವನೊಡೆಯ, ನಾನು ಬಲ್ಲೆ.ಅದಿರಲಿ, ನೀನು ಸಾರಥಿಯಾಗಿದ್ದು ಈ ಸೇವಕನನ್ನು ಕಾಪಾಡು’

ಕುಮಾರವ್ಯಾಸ ಹೇಳುತ್ತಾನೆಃ ‘ಎನಲು ನಗುತ ಎತ್ತಿದನು, ಸಾರಥಿತನವ ಕೈಕೊಂಡನು’; ಸ್ವಲ್ಪವೂ ಅಹಂಕಾರವಿಲ್ಲದೆ ‘ಕಿರೀಟಿಯ ಮನೆಯ ಬಂಡಿಯ ಬೋವನಾದನು(ಗಾಡಿ ಹೊಡೆಯುವವ) ವೀರ ನಾರಾಯಣ’

ಕುಮಾರವ್ಯಾಸ ಪ್ರತಿಷ್ಠಾನ
೨೩/೧/೨೦೧೭

No comments:

Post a Comment