Monday, December 26, 2016



ಐಸಲೇ ಕುಮಾರವ್ಯಾಸ!                           -೬೨-
ಕರ್ಣ ಪ ೨೫-೩೩


ಕರ್ಣಪರ್ವ,ವಿರಾಟಪರ್ವ ಉದ್ಯೋಗ ಪರ್ವಗಳು ಕುಮಾರವ್ಯಾಸನ ಮೇರು ಪ್ರತಿಭೆ ಲೀಲಾಜಾಲವಾಗಿ ಹರಿದಾಡಿರುವ ಭಾಗಗಳು. ಯಾವ ಪದ್ಯವನ್ನು ವಿವರಿಸುವುದು ಯಾವುದನ್ನು ಬಿಡುವುದು?

ಇರಲಿ, ಸರ್ಪಾಸ್ತ್ರದಿಂದ ಅರ್ಜುನನಿಗೆ ಹೇಗೆ ಮುಕ್ತಿ ಸಿಕ್ಕಿತು? ಎಲ್ಲರಿಗೂ ತಿಳಿದಿದೆ.ಕವಿ ಹೇಳುತ್ತಾನೆ; ‘ತಡೆಯದೈದಂಗುಲಕೆ ರಥವನು ನೆಡಿಸಿದನು ಹರಿ ಧರೆಗೆ’ . ಅಷ್ಟೇ ಸಾಕಾಯಿತು.ಕೊಲ್ಲಲು ತವಕದಿಂದ ಬಂದ ಬಾಣ ಅರ್ಜುನನ ಕಿರೀಟವನ್ನು ಹಾರಿಸಿಕೊಂಡು ಹೋಯಿತು!

ಈ ಐದಂಗುಲ ರಥವನ್ನು ಶ್ರೀಕೃಷ್ಣ ತಗ್ಗುವಂತೆ ಮಾಡಿದ್ದು ಹೇಗೆ? ಅವನು ಸಾಕ್ಷಾತ್ ಭಗವಂತ ಅಸಾಧ್ಯವಾದದ್ದು ಏನು? ಎಂದು ಕೆಲವರು ಭಾವಿಸಿದರೆ ಆ ಯುಗದ ಮಹಾ ತಂತ್ರಜ್ಞಾನಿ ಎನಿಸಿದ್ದ ಕೃಷ್ಣನಿಗೆ ಇಂಥಾ ಸಾಧ್ಯತೆಯ ಅರಿವಿದ್ದು ಸಕಾಲದಲ್ಲಿ ಅವನ್ನು ಉಪಯೋಗಿಸಿದ ಎನ್ನುವವರೂ ಇದ್ದಾರೆ. ಭಗದತ್ತನ ಶೂಲವನ್ನು ಪರಿಹರಿಸಿದ್ದು,ದುರ್ಯೋಧನನ ಆಸ್ಥಾನದಲ್ಲಿ ಸಿಂಹಾಸನ ಮುರಿದು ಬೀಳುವಂತೆ ಮಾಡಿದ್ದು,ಬೇರಾರಿಗೂ ಅಸಾಧ್ಯವಾದ ಚಕ್ರ ಪ್ರಯೋಗ, ಜರಾಸಂಧ, ದುರ್ಯೋಧನ ಇವರ ವಧೆಯ ಸಂದರ್ಭದಲ್ಲಿ ಅಮೂಲ್ಯವಾದ ಸೂಚನೆಯನ್ನು ಭೀಮನಿಗೆ ನೀಡಿದ್ದು ಅವನ ಅಗಾಧವಾದ ತಂತ್ರಜ್ಞಾನದ ಪರಿಣಾಮ ಎಂದು ಭಾವಿಸುವುದರಲ್ಲಿ ಕೃಷ್ಣನ ಪಾತ್ರಕ್ಕೆ ಕುಂದೇನೂ ಉಂಟಾಗುವುದಿಲ್ಲ ಬದಲಾಗಿ ಹೆಚ್ಚು ವೈಜ್ಞಾನಿಕ ಅನ್ನಿಸಲೂ ಬಹುದು. ಇರಲಿ.


ಶ್ರೇಷ್ಠ ಸಾರಥಿಯಾಗಿದ್ದ ಹರಿಗೆ ರಥವನ್ನು ತಗ್ಗಿಸಬಲ್ಲ ತಂತ್ರದ ಅರಿವಿತ್ತು ಎಂದರೆ ಅಚ್ಚರಿಯೇನು?

ಅಂತೂ ಬಾಣ ಅರ್ಜುನನ ಕಿರೀಟವನ್ನಷ್ಟೇ ಹಾರಿಸಿ ಅರೆ! ತಲೆ ಬದುಕಿತೇ? ಛೆ! ಎನ್ನುತ್ತಾ ಹಲ್ಲು ಮಸೆಯುತ್ತಾ ಪುನಃ ಕರ್ಣನ ಬಳಿ ಓಡಿತು!
ತೊಡುತೊಡಿನ್ನೊಮ್ಮೆ ಎನ್ನನಕಟಾ
ಕೆಡಿಸಿದೆಯಲಾ ರಾಜಕಾರ್ಯವ
ನುಡಿದು ಹೇಳನೆ ನಿನ್ನ ಸಾರಥಿ ಲಕ್ಷ್ಯಭೇದನವ?
ಆಡಗಲಿ ಇನ್ನೀರೇಳು ಭುವನದಲಿ
ಆಡಗಿ ತಿಂಬೆನು ನರನನು
ಎಂದವಗಡಿಸಿ ಕರ್ಣನ ಬೆಸನ ಬೇಡಿತು ಮತ್ತೆ ಫಣಿಬಾಣ

(ಲಕ್ಷ್ಯ ಭೇದನ- ಗುರಿ ಸಾಧಿಸುವಿಕೆ; ಈರೇಳು ಭುವನ-ಹದಿನಾಲ್ಕು ಲೋಕ, ಬೆಸನ-ಆಜ್ಞೆ)

ಅರ್ಥಃ’ ಹೇ ಕರ್ಣಾ, ಎಂಥಾ ಅನ್ಯಾಯ ಮಾಡಿ ರಾಜಕಾರ್ಯವನ್ನು ಹಾಳು ಮಾಡಿದೆ? ನಿನ್ನ ಸಾರಥಿ ನಿನಗೆ ಸರಿಯಾದ ಸಲಹೆಯನ್ನೇ ಕೊಟ್ಟರೂ ಅಲಕ್ಷಿಸಿದೆಯಲ್ಲ;
ನನ್ನನ್ನು ಮತ್ತೊಮ್ಮೆ ತೊಡು; ಆ ಅರ್ಜುನ ಎಂಬವನು ಹದಿನಾಲ್ಕು ಲೋಕದ ಯಾವ ಮೂಲೆಯಲ್ಲಿದ್ದರೂ ಸರಿ, ಅವನನ್ನು ಹುಡುಕಿ ಕೊಲ್ಲುತ್ತೇನೆ, ಬೇಗ ತೊಡು’ ಎಂದು ಕರ್ಣನ ಅನುಮತಿಯನ್ನು ಬೇಡಿತಂತೆ!’

ಪದ್ಯದ ಲಯ, ಭಾಷೆ ಇವೇ ಈ ಸಂದರ್ಭದ ನಾಟಕೀಯತೆಗೆ ಮತ್ತಷ್ಟು ಮೆರುಗು ಕೊಟ್ಟಿವೆ. ಅರ್ಜುನನಿಗಿಂತಲೂ ಹೆಚ್ಚಿನ ಸೇಡು ಆ ಬಾಣಕ್ಕೇ ಇರುವಂತಿದೆ. ಅಷ್ಟೇ ಅಲ್ಲ, ಶಲ್ಯನ ಮಾತನ್ನೂ ಕೇಳಿಸಿಕೊಂಡ ಅದು ಅನುಮೋದಿಸುತ್ತಿದೆ! ಯುದ್ಧ ಭೂಮಿಯಲ್ಲಿ ಬಾಣ ಬಂದು ವೀರಾವೇಷದ ಮಾತಾಡುತ್ತಾ ಆಜ್ಞೆ ಬೇಡುವ ಸಂದರ್ಭ ಎಷ್ಟು ಪರಿಣಾಮ ಕಾರಿ!  

‘ತೊಡು ತೊಡು’ ಎಂಬ ದ್ವಿರುಕ್ತಿ, ‘ರಾಜಕಾರ್ಯ’ದ ಬಗೆಗಿನ ವಿಷಾದ, ‘ಲಕ್ಷ್ಯ ಭೇದನವ’ ಶಬ್ದದ ಅರ್ಥವ್ಯಾಪ್ತಿ, ಕಡೆಯ ಸಾಲುಗಳಲ್ಲಿನ ಪ್ರತಿಜ್ಞಾ ವಾಕ್ಯಗಳು ಒಂದಕ್ಕೊಂದು ಪೋಷಣೆ ನೀಡಿ ಪದ್ಯವನ್ನು ಶ್ರೇಷ್ಠವಾಗಿಸಿವೆ.

ಕುಮಾರವ್ಯಾಸ ಪ್ರತಿಷ್ಠಾನ
೨೬/೧೨/೨೦೧೬

No comments:

Post a Comment