Sunday, December 4, 2016



ಐಸಲೇ ಕುಮಾರವ್ಯಾಸ! !                   -೫೬-
ಆದಿ ೧೧-೨೩

ಹೀಗೊಂದು ಕುಮಾರವ್ಯಾಸನ ನಗೆ!
 
ಬಕಾಸುರನ ವಧೆಯಾದ ಮೇಲೆ ಅಲ್ಲಿಗೆ ಬಂದ ಬ್ರಾಹ್ಮಣರಿಂದ ದ್ರೌಪದಿಯ ಸ್ವಯಂವರದ ಸುದ್ದಿ ಪಾಂಡವರಿಗೆ ತಿಳಿಯಿತು. ಜತೆಯಲ್ಲಿದ್ದ ಬ್ರಾಹ್ಮಣ ಸಮುದಾಯದೊಡನೆ ತಾವೂ ಪಾಂಚಾಲ ನಗರದೆಡೆಗೆ ಕಾಲ್ನಡಿಗೆಯಿಂದ ಹೊರಟರು.

ಹಗಲು ಸೂರ್ಯನ ಬೆಳಕು. ಇರುಳು ನಡೆವಾಗ ಮುಂದೆ ಪಾರ್ಥನ ಬೀಸುಗೊಳ್ಳಿ (ಬೆಳಕಿಗಾಗಿ ಹಿಡಿದ ಪಂಜು), ಹಿಂದೆ ಭೀಮ ಹಿಡಿದ ಕೊಳ್ಳಿಯ ಬೆಳಕು.ಜತೆಯಲ್ಲಿ ನೂರಾರು ಬ್ರಾಹ್ಮಣರ ಗುಂಪು.

ಪ್ರಯಾಣದ ಉದ್ದಕ್ಕೂ ಶುಭ ಶಕುನಗಳಾಗುತ್ತಿದ್ದವು! ಎದುರಿಗೆ ಕಳಶ, ಕನ್ನಡಿ ಹಿಡಿದ ಹೆಂಗಳೆಯರು!,ಪ್ರಾಣಿ ಪಕ್ಷಿಗಳ ಮಂಗಳ ರವಗಳು,ಸುಗಂಧದಿಂದ ಕೂಡಿದ ತಂಗಾಳಿ! ಇತ್ಯಾದಿ. ಬ್ರಾಹ್ಮಣರಿಗೆ ಪರಮಾಶ್ಚರ್ಯ! ಇದೇನಿದು ಈ ಶುಭ ಶಕುನಗಳನ್ನು ನೋಡಿದರೆ ಕನ್ಯಾಲಾಭದ ಫಲ ಇದೆ! ಕುಮಾರವ್ಯಾಸ ಮಾಡುವ ತಮಾಷೆ ನೋಡಿಃ

ಚಾರು ಶಕುನವಿದು ಉತ್ತರೋತ್ತರ; ಯಾರಿಗಿದು ಫಲಿಸುವುದೋ ?
ನಮ್ಮೊಳು ಹಾರುವರ ಹುಲುಮೊತ್ತ
ಕನ್ಯಾಲಾಭ ಫಲವಿದಕೆ,
ಭೂರಿಭಾಗ್ಯನು ನಮ್ಮ ವಿಪ್ರರೊಳಾರೆನುತ
ತತ್ ಶಕುನ ಫಲ ವಿಸ್ತಾರವನು ನೆರೆ ವಿವರಿಸುತ ನಡೆದುದು ಬುಧ ಸ್ತೋಮ

ಮೇಲಿಂದ ಮೇಲೆ ಆಗುತ್ತಿರುವ ಶುಭ ಶಕುನಗಳ ಫಲವನ್ನು ಪಾಂಡವರ ಜತೆಯಾಗಿ ನಡೆಯುತ್ತಿದ್ದ ಬ್ರಾಹ್ಮಣರು ವಿಶ್ಲೇಷಿಸುತ್ತಾ ಮಾತಾಡಿಕೊಂಡರು; ‘ಈ ಅದ್ಭುತ ಶಕುನಗಳ ಫಲ ಕನ್ಯಾಲಾಭ; ನಮ್ಮನ್ನು ನೋಡಿದರೋ ಹುಲು ಹಾರುವರ ಮೊತ್ತ;ಈ ಶಕುನಗಳ ಫಲ ಸೂಚಿಸುತ್ತಿರುವ ಭಾಗ್ಯಶಾಲಿ ಯಾರಪ್ಪಾ’ ?

 ಪಾಪ,ಜೊತೆಯಲ್ಲಿದ್ದ ಪಾಂಡವರಿಗೆ ಅವು ಸಲ್ಲುತ್ತಿದ್ದವೆಂದು ಅವರಿಗೆ ಹೇಗೆ ತಿಳಿಯಬೇಕು?

ತನ್ನ ಬ್ರಾಹ್ಮಣ ಜಾತಿಯನ್ನುಹುಲು ಹಾರುವರ ಮೊತ್ತಎಂದು ಲಘುವಾಗಿ ಗೇಲಿ ಮಾಡಲು ಮರೆಯುವುದಿಲ್ಲ ಕವಿ!

ಕುಮಾರವ್ಯಾಸ ಪ್ರತಿಷ್ಠಾನ
/೧೨/೨೦೧೬

No comments:

Post a Comment