Tuesday, December 20, 2016



ಐಸಲೇ ಕುಮಾರವ್ಯಾಸ! !                   --
ಕರ್ಣ ಪ ೨೫-೧೩


ಕರ್ಣ ಹೊರತೆಗೆದ ಸರ್ಪಾಸ್ತ್ರದ ವಿಷ ರಣರಂಗದಲ್ಲಿ ಹಬ್ಬಿದ ಹಾಗೆ ಹೊರಗೂ ಬೆರಗು ಮೂಡಿಸಿತು!ಅದೊಂದು ಜಾಗತಿಕ ವಿದ್ಯಮಾನವಾಗಿ ಕುತೂಹಲ ಮೂಡಿಸಿತು ಎಂದರೂ ತಪ್ಪಿಲ್ಲ.

ಕರ್ಣನ ಸಾರಥಿಯಾಗಿದ್ದು ಕರ್ಣನನ್ನು ಯಾವಾಗಲೂ ಹಂಗಿಸುತ್ತಲೇ ಇದ್ದ ಶಲ್ಯ ಬೆರಗಾಗಿ ಹೋದ.ಪಾತಾಳ ಲೋಕದಲ್ಲಿ ವಾಸುಕಿ( ಸರ್ಪಗಳ ಒಡೆಯ)ಯ ಧ್ವಜ ಹಾರಾಡಿದವು. ಸೂರ್ಯ(ಕರ್ಣನ ತಂದೆಯಲ್ಲವೇ?),ತಕ್ಷಕ (ಸರ್ಪಗಳ ಅರಸ!) ಹೆಮ್ಮೆಯಿಂದ ಭುಜವನ್ನು ಕುಣಿಸಿದರು, ತಮ್ಮ ಗೆಲುವು ಇದು ಎಂಬಂತೆ! ಇಂದ್ರ (ಅರ್ಜುನನ ತಂದೆ) ಗರುಡನನ್ನು ಧ್ಯಾನಿಸಿ ಬೇಡಿದ, ಅರ್ಜುನನಿಗೆ ‘ನಿರ್ವಿಷಮಸ್ತು’ ಎಂದು.

ಭೀಮಾದಿಗಳು ದಿಕ್ಕು ತೋಚದಂತಾದರು. ಸೈನಿಕರ ಮುಖ ಕಪ್ಪಿಟ್ಟಿತು.ಕವಿ ಹೇಳುತ್ತಾನೆ; ’ಅರ್ಜುನ ಕೃಷ್ಣ ಎನ್ನುವವರು ಬೆರಳಿನಲ್ಲಿ ಜಪ ಮಾಡತೊಡಗಿದರು. ಇಡೀ ರಣಭೂಮಿಯನ್ನು ಸರ್ಪಾಸ್ತ್ರದ ಭಯ ಆತಂಕ ವ್ಯಾಪಿಸಿಬಿಟ್ಟಿತು.ಅರ್ಜುನ, ಕೃಷ್ಣ ಇವರು ಸಹಾ ಒಂದು ಕ್ಷಣ ನಗಣ್ಯರಾಗಿಬಿಟ್ಟರು!

ಇಂಥಾ ಅದ್ಭುತ ಕೋಲಾಹಲವನ್ನು ಉಂಟುಮಾಡಿದ ಕರ್ಣ ಆ ಬಾಣವನ್ನು ಗಾಂಡೀವಕ್ಕೆ ಹೂಡಿ ಶಲ್ಯ(ಸಾರಥಿ)ನ ಮುಖ ನೋಡಿ ಹೆಮ್ಮೆಯಿಂದ ಬೀಗುತ್ತಾ ಕೇಳುತ್ತಾನೆಃ

‘ಏನು ಸಾರಥಿ?
ಸರಳು ಪಾಂಡವ ಸೇನೆಯನು ಗೆಲಲಹುದೆ?
ಪಾರ್ಥನ ಮಾನಿನಿಗೆ ವೈಧವ್ಯ ದೀಕ್ಷಾವಿಧಿಯ ಕೊಡಲಹುದೆ?
ಆನಲಮ್ಮುವರುಂಟೆ? ನಿನಗಿದು ಸಾನುರಾಗವೆ?
ಹೇಳೆನಲು
 ರವಿಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ’


(ಸರಳು-ಬಾಣ;  ವೈಧವ್ಯ ದೀಕ್ಷಾವಿಧಿ- ವಿಧವೆಯ ಪಟ್ಟ; ಆನಲಮ್ಮುವರು-ಎದುರಿಸಬಲ್ಲವರು; ಸಾನುರಾಗ-ಸಂತೋಷ; ರವಿಸೂನು-ಸೂರ್ಯನ ಮಗ,ಕರ್ಣ)

‘ಏನಯ್ಯ ಸಾರಥಿ ಶಲ್ಯ? ಹೇಗಿದೆ ಈ ಬಾಣ? ಪಾಂಡವ ಸೇನೆಯನ್ನು ಗೆಲ್ಲಲು ಇದು ಸಾಕು ತಾನೆ? ಪಾರ್ಥನ ಹೆಂಡತಿಗೆ ವಿಧವೆಯ ಪಟ್ಟ ಕೊಡಲು ಇದು ಸಮರ್ಥವಾಗಿದೆಯಲ್ಲವೆ?ಇದನ್ನು ಯಾರಾದರೂ ಎದುರಿಸಿ ನಿಲ್ಲಬಲ್ಲರು ಎಂದು ನಿನಗೆ ಅನ್ನಿಸುತ್ತದೋ? ಈಗ ನಿನಗೆ ಸಂತೋಷವಾಯ್ತು ತಾನೆ? ಎಂದು ಕರ್ಣ ಕೇಳಿದ. ಶಲ್ಯ ಕರ್ಣನ ಈ ಬಾಣವನ್ನು ಮನಸಾರೆ ಹೊಗಳಿದ’

ಕರ್ಣನ ಮಾತು ತುಸು ಒರಟೇ! ಅದಕ್ಕೆ ಹಲವು ಕಾರಣಗಳಿರಬಹುದು. ಅದಕ್ಕೆ ತಕ್ಕಂತೆ ಕವಿಯ ಮಾತಿನ ಪ್ರಯೋಗ ನೋಡಿಃ ಪಾರ್ಥನ ಮಾನಿನಿಗೆ ವೈಧವ್ಯ ದೀಕ್ಷಾವಿಧಿಯ ಕೊಡಲಹುದೆ? (ಮಾತಿನಲ್ಲಿರುವ ವ್ಯಂಗ್ಯ ಮತ್ತು ಭಾಷೆಯಲ್ಲಿರುವ ಶಕ್ತಿಯನ್ನು ಗಮನಿಸಿ). ಅಸ್ತ್ರದ ಶಕ್ತಿಯಿಂದ, ಪರಿಣಾಮದಿಂದ ತುಸು ಉಬ್ಬಿರುವ ಕರ್ಣನ ಮಾತಿನಲ್ಲಿರುವ ಗತ್ತು, ಆತ್ಮವಿಶ್ವಾಸ ,ತುಸು ಒರಟುತನ ಇವನ್ನು ಭಾಷೆ ಹೇಗೆ ಬಿಂಬಿಸುತ್ತದೆ!

ಯವುದಕ್ಕೂ ಕರ್ಣನನ್ನು ಹೊಗಳದೆ ಭಿನ್ನಮತೀಯನಂತೆಯೇ ವ್ಯವಹರಿಸುವ ಶಲ್ಯ ಇದನ್ನು ಮಾತ್ರ ಮನಸಾರೆ ಹೊಗಳುವುದು ಬಾಣದ ತೀವ್ರತೆಗೆ ಮತ್ತಷ್ಟು ಪೋಷಣೆ ಕೊಡುತ್ತದೆ.

ಕುಮಾರವ್ಯಾಸನ ಮಾತುಗಾರಿಕೆಯಿಂದ ಕನ್ನಡಿಗರಾದ ನಾವು ಕಲಿಯುವುದು ಎಷ್ಟಿದೆ ಅನ್ನಿಸುತ್ತದೆಯಲ್ಲವೆ?


ಕುಮಾರವ್ಯಾಸ ಪ್ರತಿಷ್ಠಾನ
೧೯/೧೧/೨೧೦೬

No comments:

Post a Comment