Friday, December 2, 2016



ಐಸಲೇ ಕುಮಾರವ್ಯಾಸ! !   --

ಆದಿ ೧೦-೩೦
ಏಕಚಕ್ರ ನಗರದಲ್ಲಿ ಪಾಂಡವರು ಬ್ರಾಹ್ಮಣ ವೇಷದಲ್ಲಿದ್ದಾಗ ಊರಿನವರಿಗೆ ಕಂಟಕಪ್ರಾಯನಾಗಿದ್ದ ಬಕಾಸುರನ ಸುದ್ದಿ ಕುಂತಿಗೆ ತಿಳಿಯಿತು.

ಮರುದಿನ ಬಕಾಸುರನಿಗೆ ಅಹಾರವಾಗಿ ಮಗನನ್ನು ಕಳಿಸಲು ಸನ್ನದ್ಧನಾಗಿದ್ದ ಬ್ರಾಹ್ಮಣನಿಗೆ ಹೇಳಿದಳು,’ನನ್ನ ಐವರು ಮಕ್ಕಳಲ್ಲಿ ಒಬ್ಬನಿಗೆ ನಾನು  ಊಟ ಹಾಕಿ ಪೂರೈಸಲಾರೆ,ಅಂಥಾ ಹೊಟ್ಟೆಬಾಕ ಅವ; ನೀವು ಚಿಂತೆ ಬಿಡಿ, ನಿಮ್ಮ ಮಗನಿಗೆ ಬದಲಾಗಿ ಅವನನ್ನು ಕಳಿಸುತ್ತೇನೆ, ಕೊಂಡೊಯ್ಯಬೇಕಾದ ಆಹಾರದ ವ್ಯವಸ್ಥೆ ಮಾಡಿ’

ಬ್ರಾಹ್ಮಣನಿಗೆ ನಂಬಲಾಗಲಿಲ್ಲ. ಊಟ ಹಾಕಲಾರೆ ಅಂತ ರಾಕ್ಷಸನಿಗೆ ಕೊಡುವ ತಾಯಿಯೂ ಇದ್ದಾಳೆಯೆ? ಕುಂತಿ ಸಮಾಧಾನ ಹೇಳಿದಳು. ಆದರೂ ನಂಬಿಕೆಯಿಲ್ಲ. ಮರುದಿನ ಎಲ್ಲಾ ವ್ಯವಸ್ಥೆ ಆಗಿದೆಯೇ ಎಂದು ನೋಡಹೋದ ಕುಂತಿಯನ್ನು ಬ್ರಾಹ್ಮಣ ಕೇಳಿದ ‘ಏನು ತಾಯೆ? ಚಾಪಳವೇನು? (ಮನಸ್ಸು ಬದಲಾಯಿಸಿದಿರೇನು?). ಕುಂತಿ ದೃಢವಾದ ದನಿಯಲ್ಲಿ ಹೇಳಿದಳು ನನ್ನ ಮಗ ಆಗಲೇ ಸಿದ್ಧನಾಗಿ ನಿಂತಿದ್ದಾನೆ’.

ಕುಂತಿ ಮಗನನ್ನೇನೊ ರಾಕ್ಷಸ ಸಂಹಾರ ಮಾಡಿ ಬಾ ಎಂದು ಹರಸಿದಳು.ಧರ್ಮರಾಯಾದಿಗಳಿಗೆ ಅಳುಕೂ ಇತ್ತು ,’ದೈತ್ಯ ಜಯ ಸಂಶಯದ ಭೇದ’ (ಒಂದು ವೇಳೆ ರಾಕ್ಷಸನ ಕೈಯೇ ಮೇಲಾದರೆ?

ಅಪರೂಪದ ಭೂರಿಭೋಜನದ ಅವಕಾಶ ಭೀಮನಿಗೆ!

ಅಣ್ಣ ತಮ್ಮಂದಿರನ್ನು ಹೆದರಬೇಡಿ ಎಂದು ಬೆನ್ನು ಚಪ್ಪರಿಸಿದ. ಅತಿ ಉತ್ಸಾಹದಿಂದ’ ಬಂಡಿಯ ಹಲಗೆಯ ಅಡರಿದನು;ತನ್ನನ್ನು ನೋಡಲು ನೆರೆದಿದ್ದವರನ್ನೆಲ್ಲ ಹೊರಡಿ, ಹೊರಡಿ ನಾನೊಬ್ಬ ಸಾಯುವವನೇ ಸಾಕು, ಎಲ್ಲರೂ ಜತೆಗೆ ಬರಬೇಡಿ ಎಂದು ಕಳಿಸಿದ. ಸರಿ, ದಾರಿಯಲ್ಲೇ ಭೀಮನ ಸಾಧನೆ ಪ್ರಾರಂಭವಾಯಿತು!

ಎಡೆಯಲೇ ಭಕ್ಷಾದಿಗಳ ಬರಿ ಹೆಡಗೆಗಳುಳಿದವು
ಕೂಳೊಳರ್ಧವ ಹೊಡೆದು ಸುರಿದನು
ಹಾಲು ತುಪ್ಪದ ಹರವಿಯೋಜೆಯಲಿ,
ಕುಡಿದು ಪಕ್ಕಲೆ ನೀರ,
ಒಯ್ಯನೆ ನಡೆಸಿ ತಂದನು
ಕಂಡು ದನುಜನ ನುಡಿದನು,
ಎಲವೋ ಕುನ್ನಿ ಕೂಳಿದೆ ತಿನ್ನು ಬಾರೆಂದ”
( ಅರ್ಧ ದಾರಿ ಸಾಗುವಷ್ಟರಲ್ಲೇ ತುಂಬಿದ್ದ ಭಕ್ಷಾದಿಗಳ( ವಡೆ, ಚಕ್ಕುಲಿ ಮುಂತಾದ ವಿಶೇಷ  ತಿನಿಸು) ಹೆಡಿಗೆಗಳು ಖಾಲಿಯಾದವು.ತಂದಿದ್ದ ಆಹಾರದಲ್ಲಿ ಅರ್ಧವನ್ನು ಖಾಲಿ ಮಾಡಿ ಹಾಲು, ತುಪ್ಪದ ಬಿಂದಿಗೆಗಳನ್ನು ಕ್ರಮವಾಗಿ ಹೊಟ್ಟೆಗಿಳಿಸಿದ. ಒಂದು ತಪ್ಪಲೆ ನೀರು ಕುಡಿದ. ಬಂಡಿಯನ್ನು ವೇಗವಾಗಿ ನಡೆಸಿಕೊಂಡು ಬಂದು ಕಾದು ಸಿಟ್ಟಾಗಿದ್ದ ಬಕಾಸುರನ ಸಮೀಪ ನಿಲ್ಲಿಸಿ ಕೂಗಿ ಹೇಳಿದ ‘ ಏಯ್ ಕುನ್ನಿ, ಅಲ್ಲಿ ಕೂಳಿದೆ ತಿನ್ನು ಬಾ)

ಭೀಮನ ಉತ್ಸಾಹ, ಆತ್ಮವಿಶ್ವಾಸ ಕುಮಾರವ್ಯಾಸನಿಗೆ ಅಚ್ಚು ಮೆಚ್ಚು. ಊರಿನವರೆಲ್ಲ ಹೆದರಿ ನಡುಗುವ ಬಕಾಸುರನನ್ನು ಭೀಮ ಮಾತನಾಡಿಸುವ ರೀತಿ ಹೇಗಿದೆ? ‘ಎಲವೋ ಕುನ್ನಿ, ಕೂಳಿದೆ ತಿನ್ನು ಬಾ’. ಊಟ ಅಥವಾ ಅನ್ನ ಎಂಬ ಗೌರವಯುತ ಶಬ್ದ ಬಳಸದೆ ‘ಕೂಳು’ ಎಂಬ ಶಬ್ದ ಬಳಸಿ ಮತ್ತಷ್ಟು ತಿರಸ್ಕಾರದ ಭಾವವನ್ನು ತುಂಬಿದ್ದಾನೆ.
ಭೀಮನ ವರ್ತನೆ ಬಕಾಸುರನಿಗೆ ಅಚ್ಚರಿ, ಕೋಪ ಮೂಡಿಸಿದ್ದರಲ್ಲಿ ಆಶ್ಚರ್ಯವಿಲ್ಲ!
ಕುಮಾರವ್ಯಾಸ ಪ್ರತಿಷ್ಠಾನ
೨/೧೨/೨೦೧೬

No comments:

Post a Comment