Friday, November 25, 2016



ಐಸಲೇ ಕುಮಾರವ್ಯಾಸ! !                                                     -೫೪-
ಆದಿ ೧೦-
ಭೀಮನ ಮತ್ತೊಂದು ಅದ್ಭುತ ಚಿತ್ರ  ಆದಿಪರ್ವದ ಅರಗಿನ ಮನೆಯಿಂದ ಪಾಂದವರು ಪಾರಾದ ಸಂದರ್ಭದಲ್ಲಿದೆ.
ಅರಗಿನ ಮನೆಗೆ ಬೆಂಕಿ ತಾಗಿದ ಕೂಡಲೇ ಭೀಮ ಎಲ್ಲರನ್ನೂ ಸುರಂಗಮಾರ್ಗದಿಂದ ಕರೆದೊಯ್ದ. ಕಾಡಿನಲ್ಲಿ ನಡೆದೂ ನಡೆದೂ ಉಳಿದವರೆಲ್ಲಾ ದಣಿದರು.ಯುಧಿಷ್ಠಿರ, ಪಾರ್ಥರ ಪಾದಗಳಿಂದ ಹಾದಿ ಕೆಸರಾಯಿತಂತೆ!

ಭೀಮನೇ ಶತ್ರು,ನಮ್ಮನ್ನು ಅರಗಿನ ಮನೆಯಲ್ಲಿ ಸಾಯಗೊಡದೆ ಇಲ್ಲಿ ತಂದು  ಕೊಂದ ಎಂದು ತಾಯಿ ಕುಂತಿ ಅತ್ತರೆ, ಕಿರಿಯರಾದ ನಕುಲ ಸಹದೇವರುಅರಸನಾದರೂ ಕೊಲ್ಲಲಿ, ರಾಕ್ಷಸರಾದರೂ ಕೊಲ್ಲಲಿ ನಾವು  ಇನ್ನು ನಡೆಯಲಾರೆವು ಎಂದು ಕುಳಿತರು.

ನಾನಿರುವಾಗ ಏಕೆ  ಚಿಂತೆ? ಎಂದು ಭೀಮ ಐವರನ್ನೂ ಹೊತ್ತು ಕಾಡಿನಲ್ಲಿ ನುಗ್ಗಿದ. ನಿದ್ರೆಗೆ ಜಾರಿದ ಅವರನ್ನು ಮರವೊಂದರ ಕೆಳಗೆ ಇಳಿಸಿ ನೀರು ತಂದು ಕುಡಿಸಿದ.ತನ್ನ ಹಸಿವು, ಬಾಯಾರಿಕೆ, ನಿದ್ರೆಯನ್ನು ಲೆಕ್ಕಿಸದೆ ನಿದ್ರಿಸುತ್ತಿದ್ದ ಅವರಿಗೆ ಕಾವಲಾಗಿದ್ದ. ಮಾತ್ರವಲ್ಲ ಅವರ ಕೆದರಿದ ಕೂದಲು,ಬಿಸಿಲಿಗೆ ಬೆಂದು ಬಾಡಿದ ದೇಹ, ಮಂಕಾದ ಮುಖ ಇವನ್ನು ನೋಡಿತನ್ನೈವರನು ಕಂಡು ಅಳಲಿದನು ಭೀಮಎನ್ನುತ್ತಾನೆ ಕವಿ. ಅಂಥ ಕೋಮಲ ಹೃದಯ ಅವನದು!
ಇರುಳೆಲ್ಲ ಕಾಡಿನಲ್ಲಿ ಕಾವಲು ಕಾಯುವುದು ಸಾಮಾನ್ಯವೆ? ಹೇಗಿತ್ತು ಭೀಮನ ಸ್ಥಿತಿ ನೋಡಿ!

ಔಕುವುದು ಬಲು ನಿದ್ರೆ,
ನಿದ್ರೆಯ ನೂಕುವನು,
ಕಣ್ಣೆವೆಗಳಲಿ ನಸು ತೂಕಡಿಕೆ ತೋರಿದೊಡೆ
ಮೈಗೆದರುವನು ಕೈಯೊಡನೆ,
ಸೋಕುವುದು ಮೈಮರವೆ,
ಮರವೆಯನೋಕರಿಸುವುದು ಚಿತ್ತವೃತ್ತಿ,
ನಿರಾಕುಲಾಂತಃಕರಣನಾದನು ಬಳಿಕ ಕಲಿ ಭೀಮ


ಅದ್ಭುತ ಪರಾಕ್ರಮಿಯಾದ ಭೀಮನ ಅತ್ಯಂತ ಮಾನವೀಯ ಮುಖ ಇಲ್ಲಿದೆ!

ಆಯಾಸದಿಂದಾಗಿ ಅವನನ್ನೂ ನಿದ್ರೆ ಆವರಿಸುತ್ತಿದೆ.ಅದನ್ನು ಹತ್ತಿಕ್ಕುತ್ತಿದ್ದಾನೆ. ಕಣ್ಣಿಗೆ ತೂಕಡಿಕೆ ತೋರಿತೋ, ಕೈ ಎತ್ತಿ, ಮೈ ಮುರಿದು ಅದನ್ನು ನಿವಾರಿಸಿಕೊಳ್ಳುವ.

ಎಷ್ಟು ಪ್ರಯತ್ನ ಪಟ್ಟರೂ ಮೈ ಮರವೆ ಉಂಟಾಗುತ್ತದೆ ಒಮ್ಮೊಮ್ಮೆ. ಆದರೆ ಅವನ ಚಿತ್ತ ವೃತ್ತಿ ಅದನ್ನು ಗೆದ್ದು ನಿಲ್ಲುತ್ತದೆ.ಕಡೆಗೂ ಭೀಮನ ಪ್ರಯತ್ನಕ್ಕೇ ಯಶಸ್ಸು ದೊರೆತು ಎಚ್ಚರಗೊಂಡು ಕಾಯುತ್ತಿದ್ದ.

ನಾವು ಆರ್ಭಟಿಸುವ ಭೀಮನನ್ನು, ಮರಗಳನ್ನು ಮುರಿದು ಶತ್ರುಗಳನ್ನು ಸಂಹರಿಸುವ ಭೀಮನನ್ನು,ಯುದ್ಧಭಯಂಕರ ಭೀಮನನ್ನು ನೋಡಿದ್ದೇವೆ. ಆದರೆ ತೂಕಡಿಕೆ, ನಿದ್ರೆಯನ್ನು ನೂಕುತ್ತಾ,ತನ್ನವರ ದುಸ್ಥಿತಿಗೆ ಅಳುತ್ತಾ, ಅರಣ್ಯದಲ್ಲಿ ನಡೆದು ನೊಂದ ತಾಯಿಯ, ಅಣ್ಣನ ಪಾದಗಳನ್ನು ಒತ್ತುತ್ತಾ ,’ಪೂರ್ವವ ನೆನೆದು ಬಿರಿದಳುವಭೀಮನ ಚಿತ್ರವನ್ನು ನೀಡುವ ಕುಮಾರವ್ಯಾಸ ಅವನನ್ನು ಹೃದಯಕ್ಕೆ ಹತ್ತಿರವಾಗಿಸುತ್ತಾನೆ.

ಕುಮಾರವ್ಯಾಸ ಪ್ರತಿಷ್ಠಾನ
೨೨/೧೧/೨೦೧೬

No comments:

Post a Comment