Wednesday, November 2, 2016

ಐಸಲೇ ಕುಮಾರವ್ಯಾಸ!! -೪೭-

ತೀರ್ಥಯಾತ್ರೆಗೆ ಬಂದು ದ್ವಾರಕೆಯ ಹೊರವಲಯದಲ್ಲಿ ಮಳೆಯಲ್ಲಿ ನೆನೆಯುತ್ತಾ ಕೃಷ್ಣನ ಧ್ಯಾನದಲ್ಲಿರುತ್ತಾನೆ ಅರ್ಜುನ.
ಶ್ರೀಕೃಷ್ಣ ಬಂದು ಅವನನ್ನು ಕಂಡು, ಬಲರಾಮನಿಗೆ ಯತಿಗಳಲ್ಲಿ ಪರಮ ಶ್ರದ್ಧೆ, ನಿನ್ನನ್ನು ಖಂಡಿತಾ ಸ್ವಾಗತಿಸುತ್ತಾನೆ,ಆಗ ಖಂಡಿತಾ ಬಾ.ನಿನ್ನ ಇಷ್ಟರ್ಥವೂ ಸಿದ್ಧಿಸುತ್ತದೆ ಎಂದ.

ಹರಿ ಹೇಳಿದಂತೆಯೇ ಆಯಿತು. ಬಲರಾಮ ಆ ಕಪಟ ಯತಿಯನ್ನು ಅರಮನೆಗೆ ತಂದಿಟ್ಟ. ಸುಭದ್ರೆಯನ್ನೇ ಅವರ ಸೇವೆಗೆ ನೇಮಿಸಿದ!'ಇವರು ಅಪೂರ್ವ ಮಹಾತ್ಮಕರು, ನೀನಿವರ ಬೆಸಸಿದನು ಮಾಡುವುದು' (ಅವರು ಹೇಳಿದ್ದನ್ನು ಮಾಡು) ಎಂದ.ಕೃಷ್ಣನಿಗೂ ಇದರ ಬಗ್ಗೆ ತಿಳಿಸಿದ.

'ಹೊರಗೆ ಕೃಷ್ಣನ ಕರೆದಿದೆಲ್ಲವ ಅರುಹಿದೊಡೆ,
ಮರುಳಾಡಿದನು,
ಮೈ ಮರೆದು ತಂಗಿಯನೊಯ್ದು ಬಿಸುಟಿರೆ ಬಣಗು ತಿರುಕನಲಿ,
ಅರಸು ಮಗಳನು ತೊತ್ತುಗೆಲಸಕೆ
ಪರುಠವಿಸಿದಿರೆ
ಶಿವ ಶಿವಾ ನಾವರಿಯೆವು
ಅಲ್ಲಿಯ ಲೇಸು ಹೊಲ್ಲೆಹವೆಮ್ಮದಲ್ಲೆಂದ'

'ಬಲರಾಮ ಶ್ರೀಕೃಷ್ಣನಿಗೆ ಯತಿಯನ್ನು ಅರಮನೆಗೆ ತಂದದ್ದರ ಬಗ್ಗೆ ಹೇಳುತ್ತಲೇ, ವ್ಯಂಗ್ಯವಾಡಿದ. ಹೂವಿನಂಥಾ ಸುಕುಮಾರಿಯಾದ ತಂಗಿಯನ್ನು  ಯಾರೋ ತಿರುಪೆಯವನ ಸೇವೆಗೆ ಹಾಕಿದೆ ತಾನೇ? ರಾಜಕುಮಾರಿಯನ್ನು ದಾಸಿಯ ಕೆಲಸಕ್ಕೆ ಹಾಕಿದಿರಿ.ನನಗಂತೂ ಇದು ಸರಿ ಅನ್ನಿಸುವುದಿಲ್ಲ. ಅಲ್ಲಿ ನಡೆಯುವ ಒಳಿತು-ಕೆಡುಕುಗಳಿಗೆ ನಾನಂತೂ  ಹೊಣೆಯಲ್ಲ'

ತಂಗಿಯ ಬಗ್ಗೆ ತುಂಬಾ ಕಾಳಜಿಯಿರುವ ಅಣ್ಣನ ಹಾಗೆ ಎಷ್ಟು  ಸಹಜವಾದ ಮಾತು ಶ್ರೀಕೃಷ್ಣನದು!

ಶ್ರೀಕೃಷ್ಣನ ಲೀಲಾ ಮನೋಭಾವವನ್ನು,ಕಪಟ ನಾಟಕವನ್ನು  ಅವನ ಭಕ್ತನಾದ ಕುಮಾರವ್ಯಾಸ ಇಡೀ ಭಾರತದಲ್ಲಿ  ಅತ್ಯಂತ ಸಹಜವಾಗಿ,ಚೇತೋಹಾರಿಯಾಗಿ ನಿರೂಪಿಸುತ್ತಾನೆ. ಇದು ಒಂದು ಉದಾಹರಣೆ.

ಕುಮಾರವ್ಯಾಸ ಪ್ರತಿಷ್ಠಾನ
೧/೧೧/೨೦೧೬

#ಕುಮಾರವ್ಯಾಸ

No comments:

Post a Comment