Monday, November 14, 2016



ಐಸಲೇ ಕುಮಾರವ್ಯಾಸ!!           ೫೦                    
ಆದಿ ಪ ೨೦-೪೬
ಸುಭದ್ರೆಯನ್ನು ಶ್ರೀಕೃಷ್ಣನ ಸಹಕಾರದೊಂದಿಗೆ ಮದುವೆಯಾಗಿ ಕರೆತಂದ ಅರ್ಜುನನಿಗೆ ತಳಮಳ! ದ್ರೌಪದಿ ಅವಳನ್ನು ಸ್ವೀಕರಿಸುತ್ತಾಳೆಯೆ?.ಯಾವ ರೀತಿ ಪ್ರತಿಕ್ರಿಯಿಸ ಬಹುದು? ದೊಡ್ಡ ರಂಪವೇ ಆಗಿಬಿಟ್ಟರೆ?
ಅದಕ್ಕೇ ಜತೆಗೆ ಬಂದ ಸುಭದ್ರೆಯನ್ನು ಕರೆದು ಹೇಳಿದ;
‘ಅರಮನೆಗೆ ನಡೆ,
ದ್ರುಪದ ನ೦ದನೆ ಕರೆಸಿದರೆ ನೀ ಹೋಗು,
ನಿರುತವ ಅರುಹದಿರು,
ತುರುಗಾಹಿಗಳ ಮಗಳೆ೦ದು ನುಡಿ ಸಾಕು,
ಅರಸಿ ಮಿಗೆ ಮನ್ನಿಸುವಳು, ಅಲ್ಲಿರು
ಕರೆಸಿಕೊ೦ಬೆನು ಬಳಿಕ ಎ೦ದೀ
ಸರಸಿಜಾಕ್ಷಿಯ ಕಳುಹಿದನು ನಿಜ ರಾಜ ಮ೦ದಿರಕೆ’
‘ಸುಭದ್ರೇ, ನಾನು ನಿನ್ನೊಡನೆ ಬರುವುದಿಲ್ಲ. ನೀನು ಅರಮನೆಗೆ ಹೋಗು.ದ್ರೌಪದಿ ಕರೆಸಿದರೆ ಹೋಗು. ಆದರೆ ಸತ್ಯವನ್ನು ನುಡಿಯಬೇಡ .ನಾನು ತುರುಗಾಹಿಗಳ ಮಗಳೆಂದು ಹೇಳಿದರೆ ಸಾಕು.ಆವಳು ನಿನ್ನನ್ನು ಜತೆಯಲ್ಲಿರಲು ಒಪ್ಪುತ್ತಾಳೆ.ಆಲ್ಲಿರು.ನಾನು ಅನಂತರ ಬಂದು ಕರೆಸಿಕೊಳ್ಳುತ್ತೇನೆ. ಎಂದು ಅವಳನ್ನು ಅರಮನೆಗೆ ಕಳುಹಿಸುತ್ತಾನೆ”
ದ್ರೌಪದಿಯ ಬಗ್ಗೆ ಅಳುಕೂ ಇದೆ. ಅವಳ ಗುಣ ಒಳ್ಳೆಯತನದ ಬಗ್ಗೆ ವಿಶ್ವಾಸವೂ ಇದೆ.ಹಾಗಂತ ನೇರವಾಗಿ. ಕರೆದೊಯ್ಯುವ ಧೈರ್ಯವೂ ಇಲ್ಲ. ಸುಳ್ಳನ್ನಾದರೂ ಹೇಳಿ ಅಲ್ಲಿದ್ದರೆ ಪರಿಸ್ಥಿತಿ ಸುಧಾರಿಸಿದ ಮೇಲೆ ನಿಧಾನವಾಗಿ ದ್ರೌಪದಿಯ ಮನವೊಲಿಸಲು ಸಾಧ್ಯ. ಇದು ಅರ್ಜುನನ ಇಂಗಿತ.
ಮೂರು ಲೋಕದ ವೀರನಾದರೇನು? ಶ್ರಿಕೃಷ್ಣನ ತಂಗಿಯಾದರೇನು? ದ್ರೌಪದಿಯಂಥ ಹದಿಬದೆಗೆ ಹೆದರಲೇ ಬೇಕಲ್ಲವೆ ? ಈ ಸಂದಿಗ್ಢತೆಯನ್ನು ಕವಿ  ಎಷ್ಟು ಸರಳವಾದ ಮಾತುಗಳಲ್ಲಿ ಹಿಡಿದಿಟ್ಟಿದ್ದಾನೆ!
ಕುಮಾರವ್ಯಾಸ ಪ್ರತಿಷ್ಠಾನ
೧೪/೧೧/೨೦೧೬




No comments:

Post a Comment