Monday, November 14, 2016



ಐಸಲೇ ಕುಮಾರವ್ಯಾಸ!                           -೫೧-
ಆದಿ ಪ ೮-೬
ಸಂದರ್ಭ ;- ಮಕ್ಕಳಾಟದೊಂದಿಗೇ ಆರಂಭವಾದ ಭೀಮ-ದುರ್ಯೋಧನರ ವೈರ ಬರುಬರುತ್ತಾ ಹಸ್ತಿನಾವತಿಯ ಪುರಜನರಿಗೂ ಬಾಧೆ ಕೊಡಲಾರಂಭಿಸಿತು. ನೂರು ಜನ ಕೌರವರು ರಾಜ್ಯವಾಳಲಿ ಅಥವಾ ಐದು ಜನ ಪಾಂಡವರಾಳಲಿ; ಆದರೆ ಈ ನೂರೈದು ಜನರನ್ನು ಒಟ್ಟಿಗೇ ತಾಳಿಕೊಳ್ಳುವುದು ಕಠಿಣ ಎನ್ನುವ ಸ್ಥಿತಿ.
ಭೀಮನಂತೂ ದುರ್ಯೋಧನನಿಗೆ ನುಂಗಲಾರದ ತುತ್ತು. ಉಳಿದವರನ್ನು ಸಹಿಸಬಲ್ಲೆ ಆದರೆ ಈ ಭೀಮ ದುರ್ಭೇಧ್ಯನಾಗಿ ಬೆಳೆಯುತ್ತಿರುವುದು ಆತಂಕಕಾರಿ. ಶಕುನಿ, ಕರ್ಣ, ಜಯದ್ರಥರೊಡನೆ ತನ್ನ ಅಳಲನ್ನು ತೋಡಿಕೊಂಡಃ

‘ಹುದು ನಡೆಯದಿವರೊಡನೆ,
ನಮ್ಮಲಿ ಕದನವೇ ಕೈಗುಟ್ಟುವುದು,
ಕಾದಿದೊಡೆ ಹೆಬ್ಬಲವಹುದು ದುರ್ಬಲ
ದೈವಗತಿ ಬೇರೆ
ನದಿಗಳರಳೆಯ ಹಾಸು
ನವವಿಷವುದರ ದೀಪನ ಚೂರ್ಣ
ಆವಂಗದಲಿ ಸಾಪತ್ನರಲಿ ಸದರವ ಕಾಣೆ ತಾನೆಂದ’


ಇವರೊಂದಿಗೆ ಸಹಬಾಳ್ವೆ ಅಸಾಧ್ಯ; ಯುದ್ಧವೇ ಮನಸ್ಸಿಗೆ ತೋರುತ್ತದೆ; ಯುದ್ಧ ಮಾಡಿದರೆ ಬಲಶಾಲಿಯಾದವನೂ  ದುರ್ಬಲನಾಗಬಹುದು. ದೈವ ಸಂಕಲ್ಪ ಹೇಗಿರುತ್ತದೋ ತಿಳಿಯದು.
( ಭೀಮನ ವಿಷಯದಲ್ಲಿ) ನದಿಗಳು ಹತ್ತಿಯ ಹಾಸಿಗೆಯಾದವು; ಭೀಕರವಾದ ವಿಷ ಹೋಗಿ ಅರಗುವ ಚೂರ್ಣದಂತಾಯಿತು. ( ಭೀಮನನ್ನು ನದಿಯಲ್ಲಿ ಹಾಕಿದರೂ,ವಿಷವುಣಿಸಿದರೂ ಬದುಕಿ ಬಂದದ್ದರ ವಿಡಂಬನೆ)  ಈ ದಾಯಾದಿಗಳನ್ನು ಹೇಗೆ ಮಣಿಸುವುದೋ ತಿಳಿಯುತ್ತಿಲ್ಲ’
ದುರ್ಯೋಧನ ತನ್ನ ಮನೋಗತವನ್ನು ತಿಳಿಸುವಾಗ ಕವಿ ಬಳಸಿದ ಹದವಾದ ಕನ್ನಡ ಶಬ್ದ ಗಳು ಮನಸೆಳೆಯುತ್ತವೆ. ‘ಹುದು’(ಸಹಬಾಳ್ವೆ), ಅರಳೆಯ ಹಾಸು, ಉದರ ದೀಪನ ಚೂರ್ಣ, ಜನಸಾಮಾನ್ಯರ ಆಡು ಮಾತಿನ ಪದಗಳು ಪರಿಣಾಮಕಾರಿಯಾಗಿವೆ
‘ಸಾಪತ್ನರಲಿ ಸದರವ ಕಾಣೆ’ ಶಕ್ತಿಯುತವಾದ, ಅಪರೂಪದ ಪ್ರಯೋಗ. ದಾಯಾದಿಗಳನ್ನು ಹಣಿಯುವ ಮಾರ್ಗ ತೋಚುತ್ತಿಲ್ಲ ಎಂಬುದರ ಜಾನಪದ ರೂಪದ  ಅಭಿವ್ಯಕ್ತಿ. ಕುಮಾರವ್ಯಾಸನಿಗೇ ವಿಶಿಷ್ಟ ವಾದದ್ದು.

ಕುಮಾರವ್ಯಾಸ ಪ್ರತಿಷ್ಠಾನ

೧೪/೧೧/೨೦೧೬




No comments:

Post a Comment