Monday, November 7, 2016

ಐಸಲೇ ಕುಮಾರವ್ಯಾಸ!! -೪೯-

ಆದಿ ಪ ೨೦-೩೭

ಸುಭದ್ರೆಯ ಸೇವೆಯಲ್ಲಿ ಸನ್ಯಾಸಿವೇಷದ ಅರ್ಜುನ ಸಂಪೂರ್ಣ ಕರಗಿ ಹೋದ!

ಪೂಜಾದಿ ಕಾರ್ಯಗಳು ಕೇವಲ ನೆಪಕ್ಕೆ. ಸುಭದ್ರೆಗೂ  ಇಷ್ಟವಾದ ಮೇಲೆ ಹೇಳುವುದೇನಿದೆ? ಕವಿ ಹೇಳುತ್ತಾನೆ;

'ಮಿಡುಕುವುದು ಬಾಯ್,
ಚಿತ್ತವವಳಲಿ ತೊಡಕಿಹುದು
ಜಪಮಾಲೆ ಬೆರಳಲಿ ನಡೆವುತಿಹುದು,
ಅಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ
ಮೃಡನ ಪೂಜೆಗೆ ಕೈ,
ಸುಭದ್ರೆಯ ಹಿಡಿಹಿನಲಿ ಮನ,
ವರ ಸಮಾಧಿಯ ತೊಡಹು ಹೊರಗೆ,
ಒಳಗಿಂದುಮುಖಿ ನರನಾಥ ಕೇಳೆಂದ'

ಕರ್ಮ ಮತ್ತು ಚಿತ್ತ ಬೇರೆ ಕಡೆ ನೆಲೆಸಿದ ಸಾಧಕನ ಕಥೆ ಅರ್ಜುನನದು.

'ಬಾಯಿ ಮಂತ್ರ ನುಡಿಯುತ್ತಾ ಅಲುಗುತ್ತಿದೆ.ಆದರೆ ಮನಸ್ಸು ಸಂಪೂರ್ಣ ಸುಭದ್ರೆಯಲ್ಲಿ ನೆಲೆಸಿದೆ.ಬೆರಳುಗಳು ಜಪ ಮಾಲೆಯನ್ನು ತಿರುವಿ ಹಾಕುತ್ತಿವೆ.ಆದರೆ ಕಣ್ಣುಗಳು ಸುಭದ್ರೆಯನ್ನೇ ತುಂಬಿಕೊಳ್ಳುತ್ತಿವೆ.
ಕೈ, ಶಿವನ ಪೂಜೆ ಮಾಡುತ್ತಿದೆ; ಮನಸ್ಸು ಸುಭದ್ರೆಯ ಹಿಡಿತದಲ್ಲಿ! ಹೊರಗೆ ಪರಮ ಸಮಾಧಿಯ ತೋರಿಕೆ; ಆದರೆ ಅಂತರಂಗದಲ್ಲಿ ಉಪಾಸನೆಯಾಗುತ್ತಿರುವುದು  ಸುಭದ್ರೆಯ ಮೂರ್ತಿಗೆ'.

ಅರ್ಜುನನ ಇಬ್ಬಂದಿತನವನ್ನು ವಿನೋದವಾಗಿ, ಸಮರ್ಥವಾಗಿ ಹಿಡಿದಿಟ್ಟಿದ್ದಾನೆ ನಾರಣಪ್ಪ.

ಕುಮಾರವ್ಯಾಸ ಪ್ರತಿಷ್ಠಾನ
೬/೧೧/೨೦೧೬.

#







No comments:

Post a Comment