Saturday, November 19, 2016



ಐಸಲೇ ಕುಮಾರವ್ಯಾಸ!                                 -೫೨-

ಉದ್ಯೋಗ ಪ  ೬-೧೨
ಕುಮಾರವ್ಯಾಸನಿಗೆ ಭೀಮನೆಂದರೆ ವಿಶೇಷ ಪ್ರೀತಿ.
ಭೀಮನ ಪರಾಕ್ರಮ, ತುಂಟಾಟಗಳು, ಆತ್ಮವಿಶ್ವಾಸ, ವೀರೋಕ್ತಿಗಳು ಕುಮಾರವ್ಯಾಸನ ಕವಿ ಪ್ರತಿಭೆಗೆ ಹೆಚ್ಚಿನ ವೈವಿಧ್ಯವನ್ನು ಒದಗಿಸುವುದರಿಂದಲೋ ಏನೊ, ಭೀಮನ ಪಾತ್ರ ಚಿತ್ರಿಸುವಾಗ ಹೆಚ್ಚಿನ ಮಮತೆ!
ಭೀಮನಿಗೆ ಅಪಾರ ಸಾಮರ್ಥ್ಯ ಇದೆ,ಅನನ್ಯ ಪ್ರೀತಿ ಇದೆ, ಒರಟುತನವೂ ಇದೆ, ಕರುಣೆಯೂ ಇದೆ,ಮಮತೆಯೂ ಇದೆ, ಕ್ರೋಧವೂ ಇದೆ . ಹೀಗೆ ಎಲ್ಲಾ ಭಾವಗಳ ನೆಲೆಯಾಗಿವುದರಿಂದ ಭೀಮ ಬಂದಾಗಲೆಲ್ಲಾ ಕುಮಾರವ್ಯಾಸನ ಲೇಖನಿ ಸೂಕ್ಷ್ಮ ವಾಗುತ್ತದೆ; ಮೊನೆಚಾಗುತ್ತದೆ.
ವನವಾಸ,ಅಜ್ಞಾತವಾಸದ ಅವಧಿಯನ್ನು ಪೂರೈಸಿದ ಮೇಲೆ ಎಲ್ಲ ಪಾಂಡವರ ಸಂದೇಶವನ್ನು ದುರ್ಯೋಧನನಿಗೆ ತರುವ ಸಂಜಯನ ಸಂದರ್ಭ ತುಂಬಾ ಸೊಗಸಾಗಿದೆ.
ಮೊದಲಿಗೆ ಶ್ರೀಕೃಷ್ಣನ ಸಂದೇಶ ‘ ನಮಗೆ ನೀವಿಬ್ಬರೂ ಒಂದೇ, ಆದರೆ ದ್ರೌಪದಿ ನೊಂದವಳು, ಪಾಂಡವರು ನನ್ನ ಪ್ರೀತಿ ಪಾತ್ರರು ಅದರಲ್ಲಿ ಮುಚ್ಚು ಮರೆಯಿಲ್ಲ,  ಅವರ ಕಂಟಕರು ನನಗೂ ಕಂಟಕರೇ  ಸರಿ!
ಅನಂತರ   ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದ ಪ್ರತಿಜ್ಞೆಯನ್ನು ನೆನೆಪು ಮಾಡಿಕೊಳ್ಳುವಂತೆ ಅರ್ಜುನನ ಸಂದೇಶ!
ಎರಡನ್ನೂ ದುರ್ಯೋಧನ ಸಾವಧಾನವಾಗಿ ಕೇಳಿದ.
ಆದರೆ ಮುಂದೆ ಭೀಮನ ಸಂದೇಶ ಏನಿತ್ತು?

‘ತೊಡೆಗಳಿಗೆ ಸುಕ್ಷೇಮವೆ?
ನಿನ್ನೊಡೆಯನವನ ಒಡಹುಟ್ಟಿದನ ಮೈ ಜಡಿದುದೇ?
ಪಾಲಿಸಿದೊಡನಿಬರಿಗಹುದು ರಕ್ತ ಜಲ,
ಒಡನೆ ಹುಟ್ಟಿದ ನೂರ್ವರು ಮೈಗೆಡರಲೇ?
ಬೆಸಗೊಂಬುದು, ಅಂಜದಿರು,
ಒಡೆಯರಿಗೆ ಹೊಣೆಗೊಂಡೆ ಹೇಳೆಂದು
ಅಟ್ಟಿದನು ಭೀಮ..’
ಸಂಜಯ ಎಷ್ಟಾಗಲೀ ದೂತ! ಭೀಮ ಹೇಳಿದ್ದನ್ನು ಯಥಾವತ್ತಾಗಿ  ವರದಿ ಮಾಡಿದ.
‘ತೊಡೆಗಳೆರಡೂ ಕ್ಷೇಮವಾಗಿವೆ ತಾನೆ? (ಅವು ನನ್ನ ಆಸ್ತಿ, ನಾನು ಮುರಿಯ ಬೇಕಾದವು)
ನಿಮ್ಮ ಅರಸನ ತಮ್ಮ ಒಬ್ಬ ಇದ್ದಾನಲ್ಲ, ಅವನ ಮೈ ದಷ್ಟಪುಷ್ಟವಾಗಿದೆ ತಾನೆ? ( ರಕ್ತ ಹೀರಬೇಕಾದ ಹೊಣೆ ನನ್ನ ಮೇಲಿದೆ!)
ಚೆನ್ನಾಗಿ ಮೈಯನ್ನು ಪಾಲಿಸಿದರೆ ರಕ್ತ ವೃದ್ಧಿಯಾಗುತ್ತದೆ ಎಂದು ಹೇಳು
ಅನಂತರ ಅವನ ಜತೆ ಹುಟ್ಟಿದ ನೂರು ಜನ ತಮ್ಮಂದಿರು ಬಡವಾಗಿಲ್ಲವಷ್ಟೇ? ( ಅವರ ಹೊಣೆಗಾರಿಕೆಯೂ ಸಹಾ ನನ್ನ ಮೇಲಿದೆ!)
ಈ ಎಲ್ಲದರ ಯೋಗಕ್ಷೇಮ ಭೀಮ ಕೇಳಿದನೆಂದು  ಹೆದರದೆ ಹೇಳು. ಅವರೆಲ್ಲರ (ಸಂಹಾರದ) ಹೊಣೆಗಾರ ನಾನೇ’
ಎಂದು ಭೀಮ ಹೇಳಿಕಳಿಸಿದ್ದಾನೆ ಮಹಾಪ್ರಭು ಎಂದ ಸಂಜಯ.
ದುರ್ಯೋಧನನಿಗೆ ಎಂಥಾ ಪರಿಣಾಮವಾಯಿತೆಂದು ಬೇರೆ ಹೇಳಬೇಕಿಲ್ಲ ತಾನೆ?
ಭೀಮನ ತೀಕ್ಷ್ಣ ವ್ಯಂಗ್ಯ ಸಂದೇಶಕ್ಕೆ ಕುಮಾರವ್ಯಾಸನ ಮಾತಿನ ಕೊಡುಗೆ ಹೇಗಿದೆ?

ಕುಮಾರವ್ಯಾಸ ಪ್ರತಿಷ್ಠಾನ
೧೯/೧೧/೨೦೧೬


































No comments:

Post a Comment