Monday, November 21, 2016



ಐಸಲೇ ಕುಮಾರವ್ಯಾಸ!!                                -೫೩-

ಉದ್ಯೋಗ ಪ ೬-೩೦

ಸಂಧಾನಕ್ಕೆ ಹೊರಡುವ ಮುನ್ನ ಶ್ರೀಕೃಷ್ಣ ಧರ್ಮರಾಯನ ಇಂಗಿತ ಏನೆಂದು ಕೇಳಿದ. ‘ಕೃಷ್ಣಾ, ಭೂಮಿಗಾಗಿ ಸೋದರರು ಹೊಡೆದಾಡಿ ಕೆಟ್ಟರೆಂಬ ಅಪಖ್ಯಾತಿ ಬೇಡ. ಕೆಲವು ನಗರಗಳನ್ನು ದುರ್ಯೋಧನ ಕೊಡಲಿ ಸಾಕು’ ಎಂದ ಧರ್ಮರಾಯ.

ಭೀಮನನ್ನು ಕೇಳಿದರೆ ಆಶ್ಚರ್ಯ! ಅದಕ್ಕೇ ದನಿಗೂಡಿಸಿದ!

ಸಹದೇವನ ವಿನಾ ಉಳಿದೆಲ್ಲರಿಗೂ ಸಂಧಿಯೇ ಮತ! ಶ್ರೀಕೃಷ್ಣನ ಭೂಭಾರಹರಣವನ್ನು ಅನುಮೋದಿಸುವವರೇ ಇಲ್ಲ!

ಯಾವಾಗ ದ್ರೌಪದಿ ಬಂದು ಸಿಟ್ಟಿನಿಂದ ‘ನೀವು ಸಂಧಿ ಮಾಡಿಕೊಳ್ಳಿ;ನಿಮ್ಮ ಹಂಗೇ ಬೇಡ,ನನ್ನ ಮಕ್ಕಳು, ಅಭಿಮನ್ಯು, ಘಟೋತ್ಕಚ, ಮತ್ತು ತನ್ನ ತವರಿನವರು ಸೇರಿ ಪ್ರತಿಜ್ಞೆಯನ್ನು ನೆರೆವೇರಿಸುತ್ತಾರೆ ಎಂದು ಗುಡುಗಿದಳೋ,ಐವರಲ್ಲೂ ಕಂಪನ ಉಂಟಾಯಿತು. ತಕ್ಷಣ ಬದಲಾದವನು ಭೀಮ. ದ್ರೌಪದಿಯನ್ನು ಸಂತೈಸುತ್ತಾ ನುಡಿದಃ

ಕೆಡಹಿ ರಿಪುವನು ಕರುಳ ದಂಡೆಯ ಮುಡಿಸುವೆನು ಮಾನಿನಿಗೆ,
ರಕುತವ ಕುಡಿಯಲೆರೆಯುವೆನು ಶಾಕಿನಿಯರಿಗೆ ತತ್ಸಹೋದರರ
ನಡೆದು ಸಂಧಿಯ ಮಾಡಿ ಮುರರಿಪು ಕೊಡಿಸು ಸಾಕು
ಐದೂರನಿವರಿಗೆ,
ತಡೆಯದಾನೆರಡೂರ ಕೊಂಬೆನು ಕೌರವೇಂದ್ರನಲಿ..’

(ಊರು ಎಂಬ ಶಬ್ದಕ್ಕೆ ನಗರ ಎಂಬುದು ಒಂದರ್ಥ, ತೊಡೆ ಎಂದು ಇನ್ನೊಂದರ್ಥ. ಕುಮಾರವ್ಯಾಸ ಈ ಎರಡೂ ಅರ್ಥವನ್ನು ಬಳಸಿ ಶ್ಲೇಷೆಯಿಂದ ಸೊಗಸು ತಂದಿದ್ದಾನೆ)

‘ಕೃಷ್ಣಾ,ಶತ್ರುಗಳನ್ನು ಕೊಂದು ಅವರ ಕರುಳಿನ ದಂಡೆಯನ್ನು ದ್ರೌಪದಿಗೆ  ಮುಡಿಸುತ್ತೇನೆ. ಆ ನೂರು ಜನ ಸಹೋದರರ ರಕ್ತವನ್ನು ಪಿಶಾಚಿಗಳಿಗೆ ಎರೆಯುತ್ತೇನೆ. ನೀನು ಸಂಧಿಯನ್ನು ಮಾಡಿ ಇವರಿಗೆ ಐದು ಊರನ್ನು( ನಗರ) ಕೊಡಿಸು,ಆಳಲಿ. ದುರ್ಯೋಧನನಿಂದ ಎರಡು ಊರುಗಳನ್ನು (ತೊಡೆಗಳನ್ನು) ನಾನೇ ಕಿತ್ತುಕೊಳ್ಳುತ್ತೇನೆ’

ಭೀಮನ ಕ್ರೋಧ, ತೀಕ್ಷ್ಣ ವ್ಯಂಗ್ಯಗಳನ್ನು ಧ್ವನಿಸಲು ಕುಮಾರವ್ಯಾಸ ಬಳಸಿದ ಭಾಷೆಗೆ ವ್ಯಾಖ್ಯಾನ ಬೇಕೇನು?

ಕುಮಾರವ್ಯಾಸ ಪ್ರತಿಷ್ಠಾನ
೨೦/೧೧/೨೦೧೬

No comments:

Post a Comment