Wednesday, December 21, 2016



ಐಸಲೇ ಕುಮಾರವ್ಯಾಸ! !                   -೬೦-

ಕರ್ಣ ಪ ೨೫-೧೭


ಕರ್ಣ ಹೂಡಿದ ಸರ್ಪಾಸ್ತ್ರವನ್ನು ಶಲ್ಯ ಹೊಗಳಿದ್ದು ಸರಿ. ಆದರೆ ಅನುಭವಿ ವೀರನಾಗಿ ಒಂದು ವಿಕಲ್ಪವನ್ನೂ ಸೂಚಿಸಿದ.
ನೀನು ಹೂಡಿದ ಅಸ್ತ್ರವೇನೋ ಅದ್ಭುತವಾದದ್ದೇ.ಇಷ್ತು ದಿನ ಎಲ್ಲಿ ಅಡಗಿತ್ತಿದು? ಇರಲಿ, ನಿನ್ನ ಗುರಿ ಸ್ವಲ್ಪ ಸರಿ ಅನ್ನಿಸುತ್ತಿಲ್ಲ. ಕೊರಳಿಗೆ ಗುರಿ ಇಟ್ಟಿದ್ದೀಯೆ. ವ್ಯತ್ಯಾಸವಾದರೆ ಕಿರೀಟವನ್ನು ಹಾರಿಸಬಹುದು. ಎದೆಗೆ ಗುರಿಯಿಡು, ಏರುಪೇರಾದರೂ ಕೊರಳಿಗೆ ತಾಗುವುದು ಸಿದ್ಧ. ಮರಳಿ ಬೇಗ ತೊಡು ಕೌರವನ ಅರಸುತನ ಉಳಿಯಲಿ

ಅದಕ್ಕೆ ಉತ್ತರವಾಗಿ ಕರ್ಣ ಹೇಳುವ ಮಾತು ವಿಚಾರಯೊಗ್ಯವಾಗಿದೆ;

ಒಂದು ಶರಸಂಧಾನ
ನಾಲಗೆಯೊಂದು ನಮ್ಮಲಿ
ಕುಟಿಲ ವಿದ್ಯೆಯನೆಂದು ಕಂಡೈ ಶಲ್ಯ ನಾವಡಿಯಿಡುವ ಧರ್ಮದಲಿ
ಇಂದು ಹೂಡಿದ ಶರವನಿಳುಹುವುದಂದವೇ
ನೀನರಿಯೆ ಹೆರಸಾರು
ಎಂದು ತಿರುವಿನೊಳಂಬನೊದೆದನು ಕರ್ಣ ಬೊಬ್ಬಿಡುತ
(ಶರಸಂಧಾನ-ಬಾಣ ಹೂಡುವಿಕೆ; ಇಳುಹುವುದು-ಕೆಳಕ್ಕಿಳಿಸುವುದು,ಹೆರಸಾರು-ಪಕ್ಕಕ್ಕೆ ಹೋಗು; ತಿರುವು-ಬಿಲ್ಲಿನ ಹೆದೆ; ಅಂಬು-ಬಾಣ
ಅರ್ಥಃ‘ನನ್ನಲ್ಲಿ ಶರಸಂಧಾನ (ಬಾಣದ ಗುರಿ)ಒಂದೇ, ನಾಲಗೆಯೂ ಒಂದೇ; ನಾನು ನಡೆಯುವ ಮಾರ್ಗದಲ್ಲಿ ಎಂದಾದರೂ ಕುಟಿಲತೆಯನ್ನು ನೋಡಿದ್ದೀಯೇನು?
ಈಗ ನಾನು ಬಾಣವನ್ನು ಹೂಡಿಯಾಗಿದೆ, ಅದನ್ನು ಇಳಿಸುವುದು, ಬದಲಾಯಿಸುವುದು ಸರಿಯಲ್ಲ;ನಿನಗೆ ತಿಳಿಯದು, ದೂರ ಸರಿ ‘ ಎಂದು ಹೇಳುತ್ತಾ , ಜೋರಾಗಿ ಘರ್ಜಿಸುತ್ತಾ ಬಾಣವನ್ನುಬಿಟ್ಟೇಬಿಟ್ಟ’
ಯುದ್ಧದಲ್ಲಿ ನ್ಯಾಯ-ಅನ್ಯಾಯಗಳ ಪರಾಮರ್ಶೆ ಇರುವುದಿಲ್ಲ ಎನ್ನುತ್ತಾರಾದರೂ ಮಹಾಭಾರತದ ಧರ್ಮಯುದ್ಧದಲ್ಲಿ ಕೆಲವು ನಿಯಮಗಳಿದ್ದವು. ಮಿಗಿಲಾಗಿ ಕರ್ಣ ಸಹಾ ವೀರನಾಗಿ ತನ್ನದೇ ಆದ ವೈಯಕ್ತಿಕ ಮೌಲ್ಯವನ್ನು ಸಹಾ ಕಾಪಾಡಿಕೊಂಡಿದ್ದ. ಕರ್ಣ ದುರ್ಯೋಧನ ಪಕ್ಷಪಾತಿಯಾಗಿದ್ದ ಅನ್ನುವುದನ್ನು ಹೊರತುಪಡಿಸಿದರೆ ಅನೇಕ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡಿದ್ದ. ನನ್ನ ನಡೆ, ಬಾಣಸಂಧಾನ ಒಂದೇ ಎಂದು ಅಷ್ಟೇನೂ ಹಿತೈಷಿಯಲ್ಲದ ಶಲ್ಯನಿಗೆ ಸವಾಲು ಹಾತ್ತಾನೆಂದರೆ ಸಾಮಾನ್ಯವಲ್ಲ. ಶಲ್ಯನೂ ಅದನ್ನು ಅಲ್ಲಗಳೆಯುವುದಿಲ್ಲ!
‘ಬಾಣದ ಗುರಿಯಷ್ಟೇ ಅಲ್ಲ; ನಾಲಗೆಯೂ ನನಗೆ ಒಂದೇ’ ನಿಮಿಷಕ್ಕೊಮ್ಮೆ ಮಾತು,ಮನೋಭಾವ, ಪಕ್ಷ  ಬದಲಿಸುವ ನಮಗೆ ಕರ್ಣ ಎಷ್ಟು ನಿಷ್ಠುರವಾದ ಸಂದೇಶ ನೀಡಿದ್ದಾನೆ!
ಮಹಾಭಾರತದ ಪಾತ್ರಗಳಲ್ಲೇ ವಿಶಿಷ್ಟವಾಗಿ, ಒಳಿತು ಕೆಡುಕುಗಳ ಸಂಗಮವಾಗಿ ಕಾಣುವ ಕರ್ಣನ ಗಟ್ಟಿತನಕ್ಕೆ ಕುಮಾರವ್ಯಾಸನ ಈ ಪದ್ಯ ಸಾಕ್ಷಿಯಾಗಿ ನಿಲ್ಲುತ್ತದೆ.

ಕುಮಾರವ್ಯಾಸ ಪ್ರತಿಷ್ಠಾನ
೨೧/೧೨/೨೦೧೬

No comments:

Post a Comment