Sunday, December 18, 2016



ಐಸಲೇ ಕುಮಾರವ್ಯಾಸ! !                   -೫೮-
ಕರ್ಣ ೨೫-


ಕುಮಾರವ್ಯಾಸನ ಸಮಗ್ರ ಪ್ರತಿಭೆ ವಿಶೇಷವಾಗಿ ಬೆಳಗಿರುವ ಭಾಗ ಕರ್ಣಪರ್ವ ಎಂದರೆ ತಪ್ಪಿಲ್ಲ.ಅಷ್ಟು ಪಕ್ವವಾದ, ರಸವತ್ತಾದ ಕಾವ್ಯ ನೋಡಸಿಗುತ್ತದೆ.
ಕರ್ಣಾರ್ಜುನರ ಯುದ್ಧ ತೀವ್ರಗತಿಯನ್ನು ತಲಪಿದಾಗ ಕರ್ಣ ತನ್ನ ಬತ್ತಳಿಕೆಯಿಂದ ಮಹಾಸ್ತ್ರವೊಂದನ್ನು ಹೊರತೆಗೆದ!
ಅದರ ವಿಶೇಷವೇನು?

ಉಗಿದನುರಗಾಸ್ತ್ರವನು, ಹೊಮ್ಮೂಡಿಗೆಯೊಳಗೆ
ಹೊರಕಯ್ಯ ಗಾಳಿಗೆ ಹೊಗೆಯ ಹೊದರಿನ ಹೊರಳಿ ಹಬ್ಬಿತು
ಕೂಡೆ ಕಿಡಿಯಿಡುತ
ಗಗನ ಗಮನದ ನಿಖಿಳ ವಿಹಗಾಳಿಗಳು ಬೆಂದವು
ಗಾಢ ಗರಳದ ಸೊಗಡ ಸೋಹಿಗೆ
ಕಂಠಣಿಸಿತೆರಡೊಡ್ಡು ಕಳವಳಿಸಿ

( ಹೊಮ್ಮೂಡಿಗೆ-ಚಿನ್ನದ ಬತ್ತಳಿಕೆ, ಹೊರಕಯ್ಯಕೈ ಚಲನೆ, ಹೊದರು- ಗುಂಪು, ಹೊರಳಿ-ಸುರುಳಿ ಸುರುಳಿ,ವಿಹಗಾಳಿ- ಹಕ್ಕಿಗಳ ಸಮೂಹ, ಗರಳ- ವಿಷ, ಸೋಹು- ಸ್ಪರ್ಶ, ಕಂಠಣಿಸು- ತಳಮಳಿಸು, ಒಡ್ಡು-ಸೈನ್ಯ)

ಅರ್ಥಃ-‘ ಬತ್ತಳಿಕೆ ಯಿಂದ ಸರ್ಪಾಸ್ತ್ರವನ್ನು ಕರ್ಣ ಹೊರತೆಗೆದ. ಅದನ್ನುಹೊರತೆಗೆದ ಕೈ ಚಲನೆಯ ಗಾಳಿಯಿಂದಲೇ ಸುರುಳಿ ಸುರುಳಿಯಾದ ದಟ್ಟವಾದ ಹೊಗೆಯ ಅಲೆಗಳು ಮೂಡಿದವು! ಜತೆಗೆ ಕಿಡಿಗಳು ಕೂಡ!
ಅಷ್ತೇ ಅಲ್ಲ, ಆ ಬಾಣದ ನೇರದಲ್ಲಿ ಆಗಸದಲ್ಲಿ ಹಾರಾಡುತ್ತಿದ್ದ ಹಕ್ಕಿಗಳ ಸಮೂಹ ಉರಿ ತಾಗಿ ಬೆಂದು ಉದುರಿದವು.
ಬಾಣದಿಂದ ಉಕ್ಕುತ್ತಿದ್ದ ಗಾಢಸಂಸ್ಕೃತವಾದ ವಿಷದ ತೀವ್ರತೆಗೆ  ಎರಡೂ ಕಡೆಯ ಸೈನ್ಯಕ್ಕೆ ಝಳ ತಾಗಿ ತಳಮಳಿಸಿದವು

ಸರ್ಪಾಸ್ತ್ರದ ಪ್ರವೇಶದಿಂದಲೇ ರಣರಂಗದಲ್ಲಿ ವಿದ್ಯುತ್ ಸಂಚಾರವಾಗುತ್ತದೆ!ಭಯ ಆವರಿಸುತ್ತದೆ.ಬಾಣವನ್ನು ಹೊರತೆಗೆದಿದ್ದೇ ತಡ, ವಿಷ ವ್ಯಾಪಿಸಿತು! ಹಕ್ಕಿಗಳು ಬೆಂದು ಉದುರಿದವು! ಸೈನ್ಯದ ಎರಡೂ ಕಡೆ ಅದರ ಪರಿಣಾಮ ವ್ಯಾಪಿಸಿತು
 ಅತ್ಯಂತ ಗಂಭೀರವಾದ ಈ ಪ್ರಸಂಗವನ್ನು ಮುಂದೇನು? ಮುಂದೇನು? ಎನ್ನುವ ಹಾಗೆ ಕವಿ ತುಂಬಾ ಸಮರ್ಥವಾಗಿ ಕೊಂಡೊಯ್ಯುತ್ತಾನೆ.ಮೊದಲರ್ಧದಲ್ಲಿ ಬರುವಹಕಾರದಪದಗಳು( ಹೊಗೆಯ ಹೊದರಿನ…., )ಎರಡನೇ ಭಾಗದಲ್ಲಿ ಬರುವಗಕಾರ’ (ಗಗನ ಗಮನದ…)ಪದ್ಯದ ಬಿಗಿಯನ್ನು,ಸೊಗಸನ್ನು, ಗಾಂಭೀರ್ಯವನ್ನು ಹೆಚ್ಚಿಸಿವೆ. ಗಾಢ ಗರಳ ಸಂಸ್ಕೃತವಾದರೆ ಸೊಗಡು, ಸೋಹು ಶುದ್ಧ ಕನ್ನಡ ಪದಗಳು. ಕನ್ನಡ ಸಂಸ್ಕೃತ ಪದಗಳ ಹದವಾದ ಬೆರಕೆ ಕವಿಯ ವೈಶಿಷ್ಟ್ಯಗಳಲ್ಲೊಂದು.
ಕುಮಾರವ್ಯಾಸ ಪ್ರತಿಷ್ಠಾನ
೧೮/೧೧/೨೦೧೬

No comments:

Post a Comment