Sunday, December 25, 2016



ಐಸಲೇ ಕುಮಾರವ್ಯಾಸ!                           -೬೧
ಕರ್ಣಪ ೨೫-೨೭
ಇಡೀ ಯುದ್ಧಭೂಮಿಯನ್ನು ತಲ್ಲಣಗೊಳಿಸಿ ರಣಾಂಗಣದಿಂದಾಚೆಗೂ ಪರಿಣಾಮ ಬೀರಿದ ಸರ್ಪಾಸ್ತ್ರವನ್ನು ಕರ್ಣ ಸೆಳೆದು ಪ್ರಯೋಗಿಸಿದ!
ಪ್ರತಿಯಾಗಿ ಪಾಂಡವರು ತಮತಮಗೆ ತೋಚಿದ ದಿವ್ಯಾಸ್ತ್ರಗಳಿಂದ ಅದನ್ನು ತಡೆಯುವ ಪ್ರಯತ್ನ ಮಾಡಿದರು. ಆದರೆ ಅವೆಲ್ಲವನ್ನೂ ನುಂಗಿ ತುಪ್ಪದ ಧಾರೆಗೆ ಅಗ್ನಿ ಪ್ರಜ್ವಲಿಸುವ ಹಾಗೆ ಉಬ್ಬುತ್ತಾ ಅರ್ಜುನನ ಕೊರಳ ಸಮೀಪಕ್ಕೆ ಬಂದೇ ಬಿಟ್ಟಿತು! ಹಾಗಾದರೆ ಅರ್ಜುನನ ಸ್ಥಿತಿ? ಪಾಂಡವರ ಸ್ಥಿತಿ?

ಕುಮಾರವ್ಯಾಸ ತನ್ನ ಅಭಿಪ್ರಾಯವನ್ನು ಸಂಜಯನ ಮೂಲಕ ಹೇಳಿಸುತ್ತಾನೆಃ

ಅರಸ ಕೇಳ್,
ಏಸೇಸು ಬಾರಿಯ ಕೊರಳಡಾಯುಧ ಕಳಚದು,
ಏಸುಬ್ಬರದ ಮಾರಿಯ ಬಿಂಕ ಮುರಿಯದು
ಪಾಂಡುತನಯರಿಗೆ
ಹರಿಯ ಹರಹಿನ ವಜ್ರ ಪಂಜರದರಗಿಳಿಯಲೇ ಪಾರ್ಥ
ಅಹಿ ಮಂಜರನ ಮರುಕವ ಕೊಂಬುದೇ?
ಧೃತರಾಷ್ಟ್ರ ಕೇಳೆಂದ

(ಅಢಾಯಧ-ಕತ್ತಿಯಂಥಾ ಆಯುಧ;   ಹರಹು-ವ್ಯಾಪ್ತಿ; ಅಹಿ-ಸರ್ಪ;ಮಂಜರ- ಬೆಕ್ಕು)

ಅರ್ಥಃ ‘ಧೃತರಾಷ್ಟ್ರಾ, ಎಷ್ಟೆಷ್ಟು ಬಾರಿ ಪಾಂಡವರ  ಕೊರಳವರೆಗೂ ಮಾರಣಾಂತಿಕವಾದ ಆಯುಧಗಳು ತಲಪಿ ಹಿಂದೆ ಸರಿದಿಲ್ಲ? ಎಷ್ಟೆಷ್ಟು ಸಲ ಅವರನ್ನು ನುಂಗಲು ಬಂದ ಮೃತ್ಯು ಎಂಬ ಹೆಮ್ಮಾರಿಯ ಗರ್ವ ಭಂಗವಾಗಿಲ್ಲ? ಯಾಕೆ ಗೊತ್ತೇನು?
ಶ್ರೀಕೃಷ್ಣನೆಂಬ ವಜ್ರ ಪಂಜರದೊಳಗೆ ಭದ್ರವಾದ ರಕ್ಷಣೆ ಪಡೆದಿರುವ ಅರಗಿಣಿ ಅರ್ಜುನ; ಈ ಸರ್ಪಾಸ್ತ್ರದ ಬೆಕ್ಕಿನ ಮುಂದೆ ಪ್ರಾಣಭಿಕ್ಷೆ ಬೇಡುತ್ತದೆಯೆ? ಬೆಕ್ಕಿನ ಆರ್ಭಟ ಅದನ್ನೇನು ಮಾಡಬಲ್ಲದು?’

ಈ ಪದ್ಯದಲ್ಲಿ ಕವಿ  ಅಪರೂಪದ ರೂಪಕಗಳ ಸರಣಿಯನ್ನೇ ಸೃಷ್ಟಿಸಿದ್ದಾನೆ!

ಸಾಮಾನ್ಯವಾಗಿ ಗಿಣಿಗೆ ಶತ್ರು ಬೆಕ್ಕು.ಹಾಗಾಗಿ ಬೆಕ್ಕಿನಿಂದ ಜೀವಭಯ;ರಕ್ಷಣೆಯಿಲ್ಲದಿದ್ದರೆ ಕಥೆಮುಗಿದಂತೆಯೇ ಸರಿ. ಇಲ್ಲಿ ಸಹಾ ಅರ್ಜುನ ಎಂಬ ಅರಗಿಣಿಯನ್ನು ನುಂಗಲು ಸರ್ಪಾಸ್ತ್ರ ರೂಪದ ಬೆಕ್ಕು ನುಗ್ಗುತ್ತಿದೆ. ಆದರೆ ಅರ್ಜುನ ಎಂಬ ಗಿಣಿಗೆ ಹರಿಯ ಕರುಣೆಯ ವಜ್ರಪಂಜರದ ರಕ್ಷಾ ಕವಚವಿದೆ! ಆ ಪಂಜರದೊಳಗೆ ಭದ್ರವಾಗಿರುವ ಗಿಣಿಯನ್ನು ಎಷ್ಟೇ ಅಬ್ಬರಿಸಿದರೂ ಬೆಕ್ಕು ಏನು ಮಾಡಲಾದೀತು?

ಮೇಲೇರಿ ಬರುವ ಬಾಣ ಎಷ್ಟೇ ಮಹತ್ವವಾದದ್ದಿರಬಹುದು. ಆದರೆ ಅರ್ಜುನನಷ್ಟೇ ಅಲ್ಲ ಇಡೀ ಪಾಂಡವರ ರಕ್ಷಾ ಕವಚವಾಗಿ ಹರಿ ಅಲ್ಲಿಯೇ ರಥದ ಮೇಲೆ ಮಂಡಿಸಿಲ್ಲವೇನು?ಇಂಥಾ ಎಷ್ಟೆಷ್ಟು ಕಂಟಕಗಳು ಪಾಂಡವರನ್ನು ಕಾಡಲಿಲ್ಲ? ಎಲ್ಲವನ್ನೂ ಹರಿಯ ಕಾರುಣ್ಯದಿಂದ ದಾಟಲಿಲ್ಲವೇ? ಎಂದು ಉದ್ಗರಿಸುತ್ತಾನೆ.

ಸರ್ಪಾಸ್ತ್ರದ ಭಯಂಕರತೆಯನ್ನು ಗಾಢವಾಗಿ ವರ್ಣಿಸುತ್ತಲೇ, ಅದರ ಪರಿಣಾಮ ಉತ್ತುಂಗವನ್ನು ತಲಪಿದಾಗ ಹರಿಯ ಕಾರುಣ್ಯದ ಮುಂದೆ ಅದರ ಮಹತ್ವವನ್ನು ಅಲ್ಲಗಳೆಯುತ್ತಾ  ಭರವಸೆ ನೀಡುವ ರೀತಿ ಭಾಗವತ ಶಿರೋಮಣಿಯಾದ ಕುಮಾರವ್ಯಾಸನ ಕೃಷ್ಣ ಭಕ್ತಿಗೆ ಅನುಗುಣವಾಗಿಯೇ ಇದೆ.

ಕೊರಳವರೆಗೂ ಬಂದು ಮುರಿದು ಬೀಳುವ ಕತ್ತಿ, ನುಂಗಬಂದು ಭಂಗಿತಳಾಗುವ ಮಾರಿ ಈ ರೂಪಕಗಳು ಹಾಗೂ ಪದ್ಯದಲ್ಲಿನ ಆಡುಮಾತಿನ ಶೈಲಿ ಸಹಾ ಶಕ್ತಿಯುತ!

ಕುಮಾರವ್ಯಾಸ ಪ್ರತಿಷ್ಠಾನ
೨೪/೧೨/೨೦೧೬



No comments:

Post a Comment