Wednesday, December 14, 2016



ಐಸಲೇ ಕುಮಾರವ್ಯಾಸ! !                   -೫೭-
ಆದಿ ೧೩-೨೩
ಕುಮಾರವ್ಯಾಸನ  ಕಲ್ಪನಾ ರಮಣೀಯತೆಯನ್ನು ಸವಿಯಲು ದ್ರೌಪದೀ ಸ್ವಯಂವರದ ಸಂದರ್ಭಕ್ಕೆ ಬರಬೇಕು!

ದ್ರೌಪದಿಯ,ಅವಳ ಸಖಿಯರ,ದ್ರುಪದನ ಆಸ್ಥಾನದ, ಬಂದ ರಾಜರುಗಳಿಗೆ ಮಾಡಿದ ವ್ಯವಸ್ಥೆಯ,ವರ್ಣನೆಯನ್ನು ವಿವರ ವಿವರವಾಗಿ ನೀಡುತ್ತಾ ಹೋಗುತ್ತಾನೆ.ಒಂದೊಂದು ಪದ್ಯವೂ ಮನೋಹರವಾಗಿದೆ.ದ್ರೌಪದಿಯ ಸೌಂದರ್ಯವನ್ನಂತೂ ಕವಿಗೆ ವರ್ಣಿಸಿದಷ್ಟೂ ತೃಪ್ತಿಯಿಲ್ಲ.ಹದಿನೇಳು ಪದ್ಯಗಳು!!

 ಒಂದನ್ನು ನೋಡೋಣಃ

ಏನನೆಂಬೆನು? ಮನಸಿಜನ ಮದದಾನೆಯನು,
ಮನ್ಮಥನ ರತ್ನ ನಿಧಾನವನು,
ಟಿಪ್ಪಣವನಂಗಜ ಮಂತ್ರ ಸೂತ್ರಕದ,
ಮಾನಿನಿಯರಧಿದೈವವನು, ಸುಜ್ಞಾನಕನ್ಯಾ ಮಾತೃ ಭವನ ಸ್ಥಾನವನು,
ಮೂಲೋಕ ಮೋಹನ ವಶ್ಯ ಚಿತ್ರಕವ’

ದ್ರೌಪದಿಯ ಅತಿಶಯವಾದ ರೂಪಕ್ಕೆ ಎಷ್ಟು ರೂಪಕಗಳನ್ನು ಸೃಷ್ಟಿಸಿದರೂ ಸಾಲದು.ಮಹಾಕವಿಯಲ್ಲವೇ? ಅವನು ಸೃಷ್ಟಿಸುತ್ತಾ ಹೋಗುವ ರೂಪಕಗಳ ಸೊಗಸನ್ನು ನೋಡಿ!
‘ದ್ರೌಪದಿಯ ರೂಪವನ್ನು  ಏನು ವರ್ಣಿಸಲಿ? ಮನ್ಮಥ ಏರುವ ಪಟ್ಟದಾನೆ?ಊಹೂಂ, ಮನ್ಮಥನ ನಿಧಿಯಲ್ಲಿನ ರತ್ನ?ಅಲ್ಲ, ಮನ್ಮಥನ ಮಂತ್ರ ಸೂತ್ರಗಳಿಗೆ ಬರೆದ ಟಿಪ್ಪಣಿ ? ( ಭಕ್ತಿಸೂತ್ರಗಳು,ಬ್ರಹ್ಮಸೂತ್ರ, ವ್ಯಾಕರಣ ಸೂತ್ರಗಳ ಹಾಗೆ ಮನ್ಮಥನ ಶೃಂಗಾರ ಸೂತ್ರಗಳಿದ್ದರೆ ಅವುಗಳ ಜೀವಂತ ವ್ಯಾಖ್ಯಾನ!) ಹೆಣ್ಣುಗಳ ಅಧಿದೈವತೆ? ಸುಜ್ಞಾನಿಗಳಾದ ಹೆಣ್ಣುಗಳ ತವರುಮನೆ? ಮೂರುಲೋಕವನ್ನೂ ಮರುಳುಗೊಳಿಸ್ಲಲು, ವಶೀಕರಣ ಮಾಡಲು ಬರೆಯಲಾದ ಚಿತ್ರ? ‘

ಮನ್ಮಥನಿಗೆ ಸಂಬಂಧಿಸಿದ ರೂಪಕ ಮೂರು ಬಾರಿ! ಅಷ್ಟು ಸುಂದರವಾದ ರೂಪ! ಸುಜ್ಞಾನದ ತವರಿನಂಥಾ ಗುಣ,ಬರೇ ಹೆಣ್ಣುಗಳಿಗಲ್ಲ; ಮಾನಿನಿಯರಿಗೆ ತವರುಮನೆ!ಮಹಾಭಾರತದಂಥಾ ಬೃಹತ್ ಕಾವ್ಯ ಕಥೆಗೆ ಮೂಲ ವಸ್ತುವಾದ ದ್ರೌಪದಿಯ ರೂಪವನ್ನು ಹೇಳುವಾಗ ಬಳಕೆಯಾಗುವ ರೂಪಕಗಳೂ, ಭಾಷೆಯೂ ಮಹತ್ತಾಗಿಯೇ ಇರಬೇಕಲ್ಲವೆ?

ಕವಿಗಳಿಗೆ ಸವಾಲು ಇರುವುದು ಇಂಥಲ್ಲಿಯೇ. ಕುಮಾರವ್ಯಾಸನಿಗೆ ಅದು ನೀರು ಕುಡಿದ ಹಾಗೆ!
ಕುಮಾರವ್ಯಾಸ ಪ್ರತಿಷ್ಠಾನ                                                              ೧೪/೧/೨೦೧೬

No comments:

Post a Comment