Friday, November 24, 2017

ಐಸಲೇ ಕುಮಾರವ್ಯಾಸ! -೧೦೫-




ಐಸಲೇ ಕುಮಾರವ್ಯಾಸ!                           -೧೦೫-
(ಭೀಷ್ಮ ಪ ೬-೪೦)

ರೋಮ ರೋಮದೊಳಖಿಳ ಭುವನ ಸ್ತೋಮ ನಲಿದಾಡುವುದು ಗಡ,
ನಿಸ್ಸೀಮತನ ಗಡ,
ನಾವು ವೈರಿಗಳೆಂದು ಕೋಪಿಸುವ ಈ ಮರುಳುತನವೆತ್ತ?
ಈ ರಣತಾಮಸಿಕೆ ತಾನೆತ್ತಣದು?
ರಘುರಾಮ ರಕ್ಷಿಸು, ಬಯಲಿನಾಡಂಬರವಿದೇನೆಂದ..,’

ಭೀಷ್ಮನ ಬಾಯಲ್ಲಿ ಕುಮಾರವ್ಯಾಸ ಆಡಿಸಿರುವ ಮಾತುಗಳು ಭಕ್ತಿ ಸಾಹಿತ್ಯದಲ್ಲಿ ಸಂಚಲನವುಂಟು ಮಾಡುವಂಥಾ ಸ್ತುತಿವಾಕ್ಯಗಳಾಗಿವೆ

‘ಶ್ರೀಕೃಷ್ಣಾ, ನಿನ್ನ ಒಂದೊಂದು ರೋಮದಲ್ಲೂ ಈ ಬ್ರಹ್ಮಾಂಡ ಅಡಗಿದೆ ಎನ್ನುವುದು, ನೀನು ಎಣೆಯಿಲ್ಲದ ಮಹಾಪುರುಷ ಎನ್ನುವುದು ಜ್ಞಾನಿಗಳಿಗೆಲ್ಲಾ ತಿಳಿದ ವಿಷಯ.ಆದರೆ ನನ್ನನ್ನು ವೈರಿಯೆಂದು ಕೋಪಿಸಿ ಸಂಹಾರ ಮಾಡಲು ಬರುತ್ತಿರುವ ಈ ಹುಚ್ಚಾಟ ಏಕೆ?
ಯುಧ್ಧ ಭೂಮಿಯಲ್ಲಿ ಸತತವಾಗಿ ಸಾರಥ್ಯ ಮಾಡುತ್ತಿರುವ ನಿನಗೆ ಯುಧ್ಧದ ಮಂಕು  ಬಡಿಯಿತೋ ಹೇಗೆ?ಈ ಬಯಲಾಡಂಬರ ಏತಕ್ಕಾಗಿ?’

ಭೀಷ್ಮನ ಆಳವಾದ ಭಕ್ತಿಯ ಮಜಲುಗಳು ಕೃಷ್ಣನೆದುರು ಆಡುವ ಮಾತುಗಳಿಂದ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಭಕ್ತನಾದ ನಾನು ವೈರಿಯಾಗುವುದು ಹೇಗೆ? ಆಯುಧ ಹಿಡಿದು ನೀನು ನುಗ್ಗಿ ಬರುವುದು ತಾಮಸಿಕೆಯಲ್ಲದೆಮತ್ತೇನು? ನೀನು ನನ್ನನ್ನು ಕೊಲ್ಲಬಲ್ಲೆಯ? ನಾನು ನಿನ್ನಿಂದ ಹತನಾಗುವ ಚಾರಿತ್ರ್ಯದವನೇನು?.ಕಂಸ, ಶಿಶುಪಾಲ ಇವರೂ ನಾನೂ ಒಂದೇ ಏನು?ಇದು ಕೇವಲ ಬಯಲಿನ ಆಡಂಬರ ಎನ್ನುವ ಮಾತಿನಲ್ಲಿರುವ ಆತ್ಮವಿಶ್ವಾಸ ನೋಡಿ!

ಭಕ್ತನನ್ನು ಕೊಲ್ಲುವಷ್ಟು ರೋಷ, ನಿರ್ದಾಕ್ಷಿಣ್ಯ ಭಗವಂತನಿಗೆ ಎಲ್ಲಿಂದ ಬರಬೇಕು? ಇಂಥಾ ಸವಾಲನ್ನು ಕೇವಲ ಅಂತರಂಗ ಭಕ್ತರು ಮಾತ್ರ ಹಾಕುವುದು ಸಾಧ್ಯ

ಕುಮಾರವ್ಯಾಸ ಪ್ರತಿಷ್ಠಾನ
೨೪/೧೧/೨೦೧೭
  


No comments:

Post a Comment