Friday, November 10, 2017

ಐಸಲೇ ಕುಮಾರವ್ಯಾಸ! -೧೦೪-



ಐಸಲೇ ಕುಮಾರವ್ಯಾಸ!                           -೧೦೪-
ಭೀಷ್ಮ ಪ೬-೩೯

ತನ್ನೆದುರು ಚಕ್ರ ಹಿಡಿದು ಏರಿ ಬರುತ್ತಿರುವ ಹರಿಯನ್ನು ಭೀಷ್ಮ ನಿರಾಯುಧನಾಗಿ ಎದುರಿಸುತ್ತಾನೆ. ಅವನಿಗಿರುವ ಅಸ್ತ್ರ ಭಕ್ತಿ ಲೋಕದ ಶರಣಾಗತಿ ತತ್ವ.ಆದರೆ ಭಯದಿಂದ ಅಲ್ಲ;
 ಧೀರತನದಿಂದ;ವಿಶ್ವಾಸದಿಂದ.ಆ ವಿಶ್ವಾಸ ಎಷ್ಟು ಗಾಢವಾದದ್ದೆಂದರೆ ಅದು ಹರಿಯನ್ನೂ ಮೀರಿ ಬೆಳೆದಿದೆ!
ಸ್ವತಃ ಭಕ್ತನಾದ ಕವಿ ಭೀಷ್ಮನ ಬಾಯಿಂದ ಹೇಳಿಸಿದ ಮಾತುಗಳು ಏಳೆಂಟು ಪದ್ಯಗಳಲ್ಲಿ ಭಕಿಶಾಸ್ತ್ರದ ವ್ಯಾಖ್ಯಾನಗಳಂತಿವೆ. ಭೀಷ್ಮನಿಗಷ್ಟೇ ಅಲ್ಲ ಎಲ್ಲ ಶ್ರೇಷ್ಠ ಭಕ್ತರ ಅಂತರಂಗದ ದೃಢತೆಗೆ ಹಿಡಿದ ಕನ್ನಡಿ.

‘ಅಲಸಿಕೆಯೊಳೈನೂರು ಸಾವಿರ
ನಳಿನಭವರಡಗೆಡೆವರೆಂಬಗ್ಗಳಿಕೆಯೆತ್ತಲು?
ಹುಲುಮನುಜ ನಾನೆತ್ತಲು?
ಇದಿರು ಹರಿತಹುದೆತ್ತಲು?
ಇದು ನಿನ್ನಳತೆಗೈದುವುದಲ್ಲ;
ಲಜ್ಜೆಗೆ ಮನೆಯ ಮಾಡಿದೆ!
ಹೂಡಿದೈ ದುರ್ಯಶವನೆನಗೆಂದ’

ಭೀಷ್ಮ ಕೃಷ್ಣನ ರೋಷಕ್ಕೆ ಹೆದರುತ್ತಿಲ್ಲ, ಬದಲಾಗಿ ಭಕ್ತನಾಗಿ ವಿಮರ್ಶಿಸಿ ಅವನ ಕ್ರಿಯೆಯನ್ನು ಪ್ರಶ್ನಿಸುತ್ತಿರುವ ರೀತಿ ವಿಶಿಷ್ಟವಾಗಿದೆ

ಒಮ್ಮೆ ನೀನು ಬೇಸರಗೊಂಡೆಯೆಂದರೆ ಲಕ್ಷ ಲಕ್ಷ ಬಹ್ಮರುಗಳೇ ಸ್ಥಾನನಾಶ ಹೊಂದುತ್ತಾರೆ; ಇಲ್ಲವಾಗುತ್ತಾರೆ. ಇದು ನಿನ್ನ ಹೆಗ್ಗಳಿಕೆ! ಆದರೆ ಇದೇನಿದು? ಹುಲ್ಲು ಮನುಷ್ಯನಾದ ನನ್ನೆದುರು ಕೊಲ್ಲಲು ನುಗ್ಗಿ ಬರುತ್ತಿರುವೆ? ಇದು ನಿನ್ನ ಅಳತೆಗೆ ಸರಿಯಲ್ಲ; ನಿನ್ನ ಮಹಿಮೆಯನ್ನು ನೀನೇ ಮರೆತೆ, ನಾಚಿಕೆಗೆ ಅಸ್ಪದ ಮಾಡಿಕೊಂಡೆ! ನನಗೂ ಕೆಟ್ಟ ಹೆಸರು ಬರುವ ಹಾಗೆ ಮಾಡಿದೆ!’

ಸೂಕ್ಷ್ಮವಾಗಿ ಕೃಷ್ಣನನ್ನು ಎಚ್ಚರಿಸುತ್ತಿದ್ದಾನೆ ಭೀಷ್ಮ.ತನ್ನ ಇಷ್ಟ ದೈವದ ಹಿರಿಮೆಗೆ ಕುಂದು ಬರಬಾರದೆಂಬ ಆಸ್ಥೆ; ಕಳಕಳಿ.ಎಲ್ಲಿಯ ಭಯ? ಹೆದರಿಕೆ?

ಇದೇ ಭಕ್ತಿಚ್ಛಲ ಅಂದರೆ!

ಕುಮಾರವ್ಯಾಸ ಪ್ರತಿಷ್ಠಾನ
೧೦/೧೧/೨೦೧೭

No comments:

Post a Comment