Wednesday, September 5, 2018

ಐಸಲೇ ಕುಮಾರವ್ಯಾಸ !! - ೧೨೭ -


ಐಸಲೇ ಕುಮಾರವ್ಯಾಸ !!                  -  ೧೨೭  -
ಉದ್ಯೋಗ ೯-೩೪


‘ ನೆಲದೊಳರ್ಧವನೀವುದಿಲ್ಲ,
ಆ ಸ್ಥಳವನೈದನು ಮುನ್ನ ಕೊಡೆನು,
ಎನ್ನಿಳೆಯ ಭಾಗವನೀಸ ಕೊಟ್ಟೊಡೆ ನಿನ್ನ ಮೇಲಾಣೆ..,
ನೆಲನ ಕಡೆಯಲಿ ಮುಳ್ಳುಮೊನೆಯುಚ್ಚಳಿಪ
ಧರಣಿಯನಿತ್ತೆನಾದೊಡೆ
ಬಳಿಕ ನೀ ನಗು ಹೋಗು, ಕದನವ ಕೊಂಡು ಬಾ ಎಂದ..,’

ಶ್ರೀಕೃಷ್ಣ ಎಷ್ಟೆಷ್ಟು ಸಾಮದ ಮಾತನ್ನಾಡಿದರೂ ಅದನ್ನು ಗಣನೆಗೆ ತಂದುಕೊಳ್ಳದ ದುರ್ಯೋಧನ ತನ್ನ ಮನದ ನಿರ್ಧಾರವನ್ನು ಸ್ಪಷ್ಟವಾಗಿ ಹೇಳುವ ಮಾತು ಇದು. 

‘ಶ್ರೀ ಹರಿ, ನೀನು ಏನೇ ಹೇಳು. ನನ್ನ ನಿರ್ಧಾರ ಇದುಃ ಅರ್ಧ ರಾಜ್ಯವನ್ನು ಕೊಡುವುದಿರಲಿ; ನೀನು ಹೇಳಿದ ಐದು ಊರುಗಳನ್ನು ಕೊಡುವುದು ಸಹಾ ಸಾಧ್ಯವಿಲ್ಲ.ಕೇಳು, ನಾನು ಆಳುತ್ತಿರುವ ರಾಜ್ಯದಲ್ಲಿ ಕಿಂಚಿತ್ ಭಾಗವನ್ನಾದರೂ ನಾನು ಕೊಟ್ಟರೆ ನಿನ್ನ ಮೇಲಾಣೆ. ಅದೂ ಬೇಡ, ಈ ಕುರುಭೂಮಿಯ ಯಾವುದೇ ತುದಿಯಲ್ಲಿ ಒಂದು ಮುಳ್ಳುಮೊನೆಯಷ್ಟು ಭೂಮಿಯನ್ನು ನಾನು ಕೊಟ್ಟದ್ದೇ ಆದರೆ ನೀನು ನಗು ಹೋಗು. ಸುಮ್ಮನೆ ಯುದ್ಧವನ್ನು ಕೊಂಡು ಬಾ’

ಅರ್ಧ ರಾಜ್ಯ ಇಲ್ಲ; ಐದು ಊರುಗಳೂ ಇಲ್ಲ; ಸ್ವಲ್ಪ ತಳವೂರಲು ನೆಲ? ಅದೂ ಇಲ್ಲ. ಪಾಂಡವರಿಗೆ ಒಂದು ಮುಳ್ಳು ಮೊನೆಯಷ್ಟು ನೆಲ ಕೊಡಲಾರೆ. ಬೇಕಿದ್ದರೆ ಯುದ್ಧಮಾಡಿ ಪಡೆಯಲಿ. ಇದು ಇಂಗಿತ.

ನೆಲವನ್ನು ಕೊಟ್ಟರೆ ನಿನ್ನ ಮೇಲೇ ಆಣೆ! ನೀನೇ ಅನಂತರ ನೋಡಿ ನಗುವಿಯಂತೆ! ದುರ್ಯೋಧನನ ದರ್ಪಕ್ಕೆ ಮಾತುಗಾರಿಕೆಗೆ ಕುಮಾರವ್ಯಾಸ ಬಳಸಿರುವ ವ್ಯಂಗ್ಯದ ಭಾಷೆ ಎಷ್ಟು ಶಕ್ತಿಯುತವಾಗಿದೆ!

ಕುಮಾರವ್ಯಾಸ ಪ್ರತಿಷ್ಠಾನ
೦೫/೦೯/೨೦೧೮

No comments:

Post a Comment