Tuesday, January 17, 2017



ಐಸಲೇ ಕುಮಾರವ್ಯಾಸ!                           -೬೮-
ಉದ್ಯೋ ಪ ೨-೩೬
ಅರ್ಜುನನ ಮುಂದೆ ಹರಿ ಆಯ್ಕೆಯನ್ನಿಟ್ಟ. ಬಲರಾಮ,ಕೃತವರ್ಮ ಮತ್ತು ಯಾದವ ಸೈನ್ಯ ಒಂದು ಕಡೆ. ಯುದ್ಧ ಮಾಡದ ತಾನು ಒಂದು ಕಡೆ. ಇಡೀ ಮಹಾಭಾರತ ಯುದ್ಧದ ಫಲಿತಾಂಶ ಈ ಆಯ್ಕೆಯಲ್ಲಡಗಿದೆ.ಅರ್ಜುನನ ಆಯ್ಕೆ ಸರ್ವಥಾ ಕೃಷ್ಣನೇ. ಇಡೀ ಭೂಮಿಯೇ ಇನ್ನೊಂದು ಪಕ್ಷದಲ್ಲಿದ್ದರೂ ಅವನ ಆಯ್ಕೆ ಬದಲಾಗಲಿಕ್ಕಿಲ್ಲ.

ಇತ್ತ ದುರ್ಯೋಧನನಿಗೂ ಆತಂಕ. ಅರ್ಜುನ ಬಲರಾಮ ಸಹಿತ ಸೈನ್ಯವನ್ನು ಕೇಳಿಕೊಂಡು ಬಿಟ್ಟರೆ ತನ್ನ ಸ್ಥಿತಿ? ಆದರೆ ಹಾಗಾಗಲಿಲ್ಲ.ಅರ್ಜುನ ತನ್ನ ಆಯ್ಕೆ ನೀನೇ ಎನ್ನುವುದನ್ನು ಸ್ಪಷ್ಟಪಡಿಸಲು ಕುಮಾರವ್ಯಾಸ ಬಳಸಿದ ಮಾತುಗಾರಿಕೆಯ ಜಾಣತನವನ್ನು ನೋಡಿ;

‘ಮುರಮಥನ ಚಿತ್ತೈಸು,
ಕೌರವರರಸ ಅತಿ ಸಿರಿವಂತ,
ಸಂತರಿಸಲಾಪನು ಬಹಳ ಯಾದವ ಸ್ಸೈನ್ಯ ಸಾಗರವ
ಧರೆಯ ಸಂಪದವಿಲ್ಲದ ಅಡವಿಯ ತಿರುಕರಾವು,
ಇನಿಬರನು ಸಲೆ ಸಂತರಿಸಲಾಪೆವೆ?
ಕೃಷ್ಣ ನೀನೇ ಸಾಕು ನಮಗೆಂದ,

(ಚಿತ್ತೈಸು-ಕೇಳು; ಸಂತರಿಸು-ನಿರ್ವಹಿಸು; ಇನಿಬರು-ಇಷ್ಟು ಜನ; )

‘ಕೃಷ್ಣಾ ಕೇಳು, ದುರ್ಯೋಧನ ರಾಜ; ಶ್ರೀಮಂತ. ನಿನ್ನ ಯಾದವ ಸೈನ್ಯವೆಲ್ಲವನ್ನೂ ಸಲಹಬಲ್ಲ ಶಕ್ತಿ ಅವನಿಗಿದೆ. ನಾವು ಭೂಮಿಯಿಲ್ಲದೆ ಅಡವಿಯಲ್ಲಿ ಭಿಕ್ಷುಕರಾಗಿದ್ದು ಈಗಷ್ಟೇ ಹೊರಬಂದಿರುವವರು. ರಾಜ್ಯ-ಕೋಶವಿಲ್ಲದವರು ಅಷ್ಟು ಜನ ಸೈನಿಕರನ್ನು ಹೇಗೆ ನಿರ್ವಹಿಸಬಲ್ಲೆವು? ನಮಗೆ ನೀನೇ ಸಾಕು. ಎಂಥ ತಾರ್ಕಿಕ ಮಾತಿನ ಸರಣಿ!

ಸಾಲದ್ದಕ್ಕೆ ಮತ್ತೊಂದು ಮಾತು ಸಹಾ.’ನಾವು ಬಡವರು; ಬಡವರಿಗೆ ದಿಟ ನೀವೆ ಬೆಂಬಲವೆಂಬ ಬಿರುದನು ಕೇಳಿ ಬಲ್ಲೆವು;’ ಅರ್ಥಾತ್,  ಬಡವರಿಗೆ ಯಾವಾಗಲೂ ಇರುವ ಏಕೈಕ ಆಧಾರ ನೀನು,ನಾವು ಬಡವರೂ ಹೌದು. ನಮಗೆ ನೀನಲ್ಲದೆ ಬೇರೇನು ಗತಿ?

ಅರ್ಜುನನ ಮಾತು ಕೇವಲ ಯುದ್ಧ ಸಹಾಯಕ್ಕೆ ಸೀಮಿತವಾಗದೆ ಅದರಾಚೆಯ ಭಕ್ತೋದ್ಧಾರದ ಮಜಲನ್ನೂ ಸೂಚಿಸಿ ಕೃಷ್ಣನನ್ನೂ ಕರಗಿಸುವಷ್ಟು ಸಮರ್ಥವಾಗಿದೆ.
ಇಂಥಾ ಆಯ್ಕೆ, ಸಂಪೂರ್ಣ ಶರಣಾಗತಿ ಪಾಂಡವರನ್ನು ತನ್ನ  ಪ್ರಾಣ ಎಂದು ಕೃಷ್ಣ ಕಾಪಾಡಿದ್ದರ ಹಿಂದಿನ ಸತ್ಯ ಎಂಬುದನ್ನು ಕವಿ ಬಿಂಬಿಸುತ್ತಾನೆ.

ಕುಮಾರವ್ಯಾಸ ಪ್ರತಿಷ್ಠಾನ
೧೭/೦೧/೨೧೧೭

Saturday, January 14, 2017



ಐಸಲೇ ಕುಮಾರವ್ಯಾಸ!                           -೬೭-
ಉದ್ಯೋ ಪ ೧-೩೧

ಭೂಮಿಗಾಗಿ ಸೋದರರು ಹೊಯ್ದಾಡಿ ಹರಿಹಂಚಾದರೆಂದು ಜನ ಆಡಿಕೊಳ್ಳುವಂತಾಗುವುದು ಬೇಡ. ಹೊಂದಿಕೊಂಡು ಬಾಳುವುದರಲ್ಲಿ ಜಾಣತನವಿದೆ, ನಾವು ಕೂಡಾ ಅದನ್ನೇ ಹಾರೈಸುವುದು ಎಂದು ಶ್ರೀಕೃಷ್ಣ ಮನವೊಲಿಸಲು ನೋಡಿದ.
ಆದರೆ ದುರ್ಯೋಧನನಿಗೆ ಅದನ್ನು ಕೇಳಲೂ ವ್ಯವಧಾನವಿಲ್ಲ. ಅವನ ಗಮನವೆಲ್ಲಾ ಯಾದವ ಸೈನ್ಯದ ಮೇಲೆ. ಕೃಷ್ಣ ಏನಾದರೂ ಕಪಟ ಮಾಡಿದರೆ? ಅದಕ್ಕೆ ನೇರವಾಗಿ ಹೇಳಿದಃ


‘ಅವಧರಿಸು ಮುರವೈರಿ,
ಧರ್ಮ ಶ್ರವಣಕೋಸುಗ ಬಾರೆವಾವ್,
ಪಾರ್ಥಿವರ ಪಂಥದ ಕದನ ವಿದ್ಯಾ ಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ
ಪಾಂಡವರಿಗೆಯು ಮನದೊಲವಿನಲಿ
ಕೌರವರಿಗೆಯು ಬಲವಾಗಬೇಕೆಂದನು ಸುಯೋಧನನು’

(ಅವಧರಿಸು- ಕೇಳು;ಪಾರ್ಥಿವರು- ರಾಜರು ;ಪಂಥ- ಛಲ, ಆಹ್ವಾನ; ಇತ್ತಂಡ- ಎರಡು ತಂಡ; )

‘ಮುರವೈರಿ ಕೇಳು, ನಾವು ನಿನ್ನ ಪುರಾಣ ಪ್ರವಚನ ಕೇಳಲು ಬಂದಿಲ್ಲ. ಕ್ಷತ್ರಿಯರಿಗೆ ಅನುಗುಣವಾದ ಯುದ್ಧದಲ್ಲಿ ನಮಗೆ ಇಚ್ಛೆಯಾಗಿದೆ. ನಮ್ಮಿಬ್ಬರಲ್ಲೂ ನಿನಗೆ ಸಮಾನ ಆಸಕ್ತಿ , ಕಾಳಜಿ. ಆದ್ದರಿಂದ ನಮ್ಮ ಎರಡೂ ತಂಡಕ್ಕೂ ನೀನು ಬಲವಾಗಬೇಕು, ಇದೇ ನಮ್ಮ ಇಂಗಿತ’

ಕೃಷ್ಣ ಎಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಪಾಂಡವರ ಪರ ನಿಂತಾನೋ ಎಂಬುದು ಸುಯೋಧನನ ಆತಂಕ. ಅದಕ್ಕಾಗಿ ನಾವಿಬ್ಬರೂ ನಿನಗೆ ಒಂದೇ ಅಲ್ಲವೆ? ಎಂದು ತಾನೇ ಹೇಳಿಕೊಂಡ. ಅವನು ಯಾದವ ಸೈನ್ಯದ ಬಗ್ಗೆ ಚಿಂತಿತನಾಗಿದ್ದಾನೆ.ಅದರಲ್ಲಿ ಅವನ ಗುರು ಬಲರಾಮನೂ ಇದ್ದಾನಾದ್ದರಿಂದ ನನಗೂ ಪಾಲು ದೊರಕಬೇಕಾದ್ದು ಅಗತ್ಯಎಂಬುದು ಅವನ ಗ್ರಹಿಕೆ.

‘ಧರ್ಮ ಶ್ರವಣ’ ಮತ್ತು ‘ಕದನ ವಿದ್ಯಾ ಕಾಮ’ ಶಬ್ದಗಳ ಮಹತ್ವ ಗಮನಾರ್ಹ.ನೀನು ಹೇಳಹೊರಟಿರುವುದು ಧರ್ಮ. ಆದರೆ ನಾವು ಪುರುಷಾರ್ಥದ ಮತ್ತೊಂದು ಮೌಲ್ಯ ಕಾಮದಲ್ಲಿ ಆಸಕ್ತರು.ಯಾವ ಕಾಮ?’ ಪಾರ್ಥಿವರ ಪಂಥದ ಕದನ ವಿದ್ಯಾ ಕಾಮ!’ ಯುದ್ಧ ಕಾಮ! ಪೌರುಷಭರಿತ ಯುದ್ಧಕಾಮಿಗಳಿಗೆ ನಿನ್ನ ಧರ್ಮ  ಶ್ರವಣವೆ?

ಕೃಷ್ಣನ ಅನುಭವ ವಾಕ್ಯಗಳನ್ನು ಧರ್ಮಶ್ರವಣ ಎಂದು ತಿರಸ್ಕರಿಸಿದ್ದಕ್ಕೆ ಹರಿ ಬೇಸರಿಸಲಿಲ್ಲ. ತಂಬುಲ ಸೂಸುವಂತೆ ನಗುತ್ತಾ ಹೇಳಿದ ‘ಹಾಗಿದ್ದಲ್ಲಿ ಸರಿ ಒಂದು ಕಡೆ ಯುದ್ಧ ಮಾಡದ ನಾನು. ಮತ್ತೊಂದು ಕಡೆ ಬಲರಾಮ, ಕೃತವರ್ಮ ಸಮೇತ ಕಾದುವ ಶಕ್ತಿಯುಳ್ಳ ಯಾದವ ಸೈನ್ಯ’ ನಿನ್ನ ಆಯ್ಕೆ ಯಾವುದು ಅರ್ಜುನ? ‘ಎಂದು ಕೇಳಿದ

ಕುಮಾರವ್ಯಾಸನ ಮಾತುಗಳಲ್ಲಿನ ಕಟಕಿ,ವ್ಯಂಗ್ಯ,ನಾಜೂಕು ಮೆಲುಕುಹಾಕುವಂಥವು.

ಕುಮಾರವ್ಯಾಸ ಪ್ರತಿಷ್ಠಾನ
೧೪/೧/೨೦೧೭

Thursday, January 12, 2017



ಐಸಲೇ ಕುಮಾರವ್ಯಾಸ!                           -೬೬-
ಉದ್ಯೋ ಪ ೧-೩೦


ಶ್ರೀಕೃಷ್ಣನನ್ನು ಸಹಾಯ ಕೇಳಲು ಪಾರ್ಥ-ದುರ್ಯೋಧನರು ಹೋದ ಸಂದರ್ಭವನ್ನು ಕುಮಾರವ್ಯಾಸ ಅತ್ಯಂತ ಸೂಕ್ಷ್ಮತೆಯಿಂದ ಸ್ವಾರಸ್ಯಕರವಾಗಿ ಕಡೆದಿದ್ದಾನೆ.ಒಬ್ಬ ಅನುಭವೀ ವ್ಯಕ್ತಿಯ ಮನೋಗತಗಳು ತೆರೆದುಕೊಂಡಂತೆ!. ಅತ್ಯಂತ ಗಂಭೀರ ಸಂದರ್ಭಗಳಲ್ಲಿ ಎಂತಹ ಪಕ್ವವಾದ ಭಾಷೆಯನ್ನು ಬಳಸಬಲ್ಲನೆಂಬುದಕ್ಕೆ ಈ ಸಂದರ್ಭ ಸಾಕ್ಷಿ

ಶ್ರೀಕೃಷ್ಣ ಇಬ್ಬರನ್ನೂ ಉದ್ದೇಶಿಸಿ ಹೇಳುವ ಮತ್ತೊಂದು ಮಾತೂ ಮನೋಜ್ಞವಾಗಿದೆ.

‘ತಗರೆರಡ ಖತಿಗೊಳಿಸಿ ಬಲುಗಾಳಗವ ನೋಡುವರಂತೆ
ನಿಮ್ಮನು ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು..,
ನಗುತ ಹೆರೆಹಿಂಗುವರು, ಪಿಸುಣರು, ಬಗುಳಿದವದಿರು
ಬಳಿಕ ಕಡೆಯಲಿ ಹೊಗುವಿರೈ ನೀವಿಬ್ಬರು
ಅಪಕೀರುತಿಯ ಹಾದರಕೆ..’

(ತಗರು-ಟಗರು; ಖತಿ- ಕೋಪ; ಬಲುಗಾಳಗ-ಘೋರ ಯುದ್ಧ; ಖುಲ್ಲರು, ಪಿಸುಣರು- ಕೀಳುಜನ; ಹಿಂಗು-ನಿರ್ಗಮಿಸು)
‘ ಎರಡು ಟಗರುಗಳನ್ನು ಕೋಪದಿಂದ ಕಾದಾಡುವಂತೆ ಮಾಡಿ ಅದರ ವಿಕೃತ ಆನಂದ ಪಡೆಯುವ ಜನರು ನಿಮಗೆ ಗೊತ್ತಿಲ್ಲವೇನು? ಆ ಕ್ಷುಲ್ಲಕ ಜನ ನಿಮ್ಮನ್ನು ಉಬ್ಬಿಸಿ ಒಬ್ಬರಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ ನೀವು ಕಾದಾಡುವಂತೆ ಮಾಡುತ್ತಾರೆ. ಅನಂತರ ಒಳಗೇ ನಗುತ್ತಾ, ಆನಂದಿಸುತ್ತಾ ಹಿಂದೆ ಸರಿಯುತ್ತಾರೆ. ಅಂತಿಮವಾಗಿ ಅವರ ಮಾತುಗಳಿಗೆ  ಮರುಳಾದ ನೀವು ಮೂರ್ಖರಂತೆ ಹೊಡೆದಾಡಿ ಅಪಕೀರ್ತಿ ಹೊಂದುತ್ತೀರಿ, ತಿಳಿದುಕೊಳ್ಳಿ’

ಶ್ರೀಕೃಷ್ಣ ದುರ್ಜನರನ್ನು ಕುರಿತ ಸಾರ್ವಕಾಲಿಕವಾದ ಲೋಕಾನುಭವವನ್ನು ಹೇಳುತ್ತಿದ್ದಾನೆ!

ಶಕುನಿ ಮುಂತಾದವರು ಮಾಡುತ್ತಿದ್ದುದೂ ಅದನ್ನೇ.ಇತಿಹಾಸದಲ್ಲಿ ಇಂಥ ನಿದರ್ಶನಗಳು ಎಷ್ಟೋ ಇವೆ.ತನ್ನನ್ನು ಅರಸಿ ಬಂದವರಿಗೆ  ಅನುಭವದ ಸತ್ಯವನ್ನು ಹೇಳಬೇಕು ತಾನೆ? ಈ ಲೋಕಾನುಭವದ ಮಾತುಗಳು, ಉದಾಹರಣೆ, ಎಷ್ಟುಸಮಯೋಚಿತವಾಗಿವೆ! ಅಪಕೀರ್ತಿ ಸಹಾ ಕವಿಯ ಮಾತಿನಲ್ಲಿ ಒಂದು ಹೆಣ್ಣಿನ ರೂಪಕವನ್ನು ಪಡೆದಿದೆ.


‘ಹೊಗುವಿರಿ ಅಪಕೀರ್ತಿಯ ಹಾದರಕೆ’ ತೀಕ್ಷ್ಣ ಆಡುಮಾತಿನ ಬಳಕೆ ಕೃಷ್ಣ ನೈಜ ಕಳಕಳಿಯನ್ನು ಬಿಂಬಿಸುತ್ತದೆ.

ಕುಮಾರವ್ಯಾಸ ಪ್ರತಿಷ್ಠಾನ                                            ೧೨/೦೧/೨೦೧೭