Thursday, February 16, 2017



ಐಸಲೇ ಕುಮಾರವ್ಯಾಸ!                           -೭೩-
ಅರಣ್ಯ ಪ ೮-೪೨


ಊರ್ವಶಿ ಮನುಷ್ಯಲೋಕದ ಸಂಬಂಧಗಳನ್ನು ತಿರಸ್ಕರಿಸಿ ಹೇಳಿದಳು; ‘ದೇವಲೋಕದಲ್ಲಿ ಎಲ್ಲರೂ ಬಯಸುವುದು ಸುಖವನ್ನು.ಅನಗತ್ಯವಾದ ಸಂಬಂಧಗಳನ್ನು ಬೆರೆಸಬೇಡ. ಚೆನ್ನಾಗಿ ಯೋಚಿಸು.’ ಅರ್ಜುನ ಹೇಳಿದ ‘ಇದು ಮನುಷ್ಯ ಶರೀರ.ಅದರ ಧರ್ಮದಂತೆ ನಡೆಯುವುದೇ ಸರಿ. ಸತ್ತ ನಂತರ ದೇವಲೋಕಕ್ಕೆ ಬಂದರೆ ಆ ಮಾತು ಬೇರೆ. ತಾನಿನ್ನೂ ಮಾನವ, ಹಾಗಾಗಿ ತಪ್ಪಿ ನಡೆಯಲಾರೆ.’

ಊರ್ವಶಿಯ ಕ್ರೋಧ ಮೀರಿತು.’ಇಲ್ಲಿ ಧರ್ಮದ ಮಾತಾಡುತ್ತಿರುವೆ. ಒಬ್ಬಳನ್ನು ಐದು ಜನ ವಿವಾಹವಾಗಿದ್ದೀರಿ?ಅದು ಧರ್ಮವೋ?’

‘ಅದು ತಾಯಿಯ ಆಜ್ಞೆಯಂತೆ ನಡೆದದ್ದು. ಶರೀರ ವ್ಯಾಮೋಹದಿಂದಲ್ಲ.’

‘ಇದೂ ಸಹಾ ನಿನ್ನ ತಂದೆ ದೇವೇಂದ್ರನ ಆಜ್ಞೆಯೇ, ಹಾಗಾಗಿಯೇ ನಾನು ಬಂದದ್ದು’

‘ಬಂದದ್ದು ತಪ್ಪಿಲ್ಲ, ತಾಯಿ ಮಕ್ಕಳನ್ನು ನೋಡಲು ಯಾವ ಅಡೆ ತಡೆ?’

ತನ್ನ ಅಪೇಕ್ಷೆಯನ್ನು ತಿರಸ್ಕರಿಸಿದ್ದು ಊರ್ವಶಿಗೆ ನುಂಗಲಾರದ ತುತ್ತು.ಸಾಲದ್ದಕ್ಕೆ ದೇವಲೋಕದ ಸುಂದರಿ ತನ್ನನ್ನು ಯಾರಾದರೂ ಯಾವುದೇ ಕಾರಣಕ್ಕೆ ತಿರಸ್ಕರಿಸುವುದನ್ನ ಕಾಣಳು, ಹೇಗೆ ಅರಗಿಸಿಕೊಂಡಾಳು? ಆಪ್ರತಿಮ ಸುಂದರಿಯನ್ನ ಅಗಾಧ ಕೋಪ ಆವರಿಸಿತು!

ಕೋಪದಿಂದ ಅವಳ ಸುಮನೋಹರವಾದ ರೂಪ ಬದಲಾದದ್ದನ್ನು ಕುಮಾರವ್ಯಾಸ ವರ್ಣಿಸುತ್ತಾನೆಃ

‘ರಾಹು ತುಡುಕಿದ ಶಶಿಯೋ,
ಮೇಣ್ ರೌದ್ರಾಹಿ ಮಸ್ತಕ ಮಾಣಿಕವೋ
ಕಡುಗಾಹಿನಮೃತವೋ, ಕುಪಿತ ಸಿಂಹದ ಗುಹೆಯ ಮೃಗಮದವೋ,
ಲೋಹ ಧಾರೆಯ ಮಧುವೋ,
ಕಳಿತ ಹಲಾಹಲದ ಕಜ್ಜಾಯವೆನಿಸಿತು,
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ..,’

(ರೌದ್ರಾಹಿ-ಭಯಂಕರ ಸರ್ಪ; ಮಸ್ತಕ-ತಲೆ; ಕಡುಗಾಹಿನ-ಕುದಿಯುತ್ತಿರುವ;ಮೃದಮದ-ಕಸ್ತೂರಿ; ರೂಹು-ರೂಪು)

ಕೋಪಗೊಂಡ ಊರ್ವಶಿಯಲ್ಲಿ ಎರಡೆರಡು ವಿರುದ್ಧದ ಭಾವಗಳು ವ್ಯಕ್ತವಾದವಂತೆ! ಒಂದು ಅವಳ ಅಪ್ರತಿಮ ದೈವೀ ಸೌಂದರ್ಯ.ಅದು ನೋಡಿದವರನ್ನು ಮರುಳು ಮಾಡುವಂಥದು. ಮತ್ತೊಂದು ಕ್ರೋಧ. ಎಂಥವರಿಗೂ ಭಯ ಹುಟ್ಟಿಸುತ್ತಿತ್ತು. ಅದಕ್ಕೇ ಕವಿ ಏಕಕಾಲದಲ್ಲಿ ವಿರುದ್ಧದ ಭಾವ ಕೊಡುವ ಉಪಮಾನಗಳನ್ನೇ ಆಯ್ದು  ಊರ್ವಶಿಯ ನೈಜ ಚಿತ್ರವನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾನೆ!

ಹೇಗಿತ್ತು ಅವಳ ಆಗಿನ ರೂಪ?ಶಶಿಯಂತೆ ಸುಂದರವಾಗಿದೆ ಆದರೆ ಶಶಿಯನ್ನು ಕೋಪವೆಂಬ ರಾಹು ಹಿಡಿದಿದೆ.ಮಾಣಿಕ್ಯದಂತೆ ಪ್ರಕಾಶಿಸುತ್ತಿದೆ ಆದರೆ ಆ ಮಾಣಿಕ್ಯ ಕ್ರೋಧಗೊಂಡ ಸರ್ಪದ ಹೆಡೆಯಮೇಲಿದೆ! ಅಮೃತದಂತೆ ಆಪ್ಯಾಯಮಾನವಾಗಿದೆ ಆದರೆ ಅಮೃತ ಕುದಿಯುತ್ತಿದೆ! ಕಸ್ತೂರಿಯಂತೆ ಸುಗಂಧಭರಿತವಾಗಿದೆ ಆದರೆ ಆ ಕಸ್ತೂರಿ ಕೋಪಗೊಂಡು ಘರ್ಜಿಸುತ್ತಿರುವ ಸಿಂಹದ ಗುಹೆಯಲ್ಲಿದೆ! ಜೇನಿನಂತೆ ಮಧುರ, ಆದರೆ ಜೇನು ಹರಿತವಾದ ಖಡ್ಗದ ಅಂಚಿಗೆ ಸವರಿದ್ದು ಮುಟ್ಟಿದರೆ ಕೈ ಕುಯ್ಯುವಂಥದು! ಕಜ್ಜಾಯದಂತೆ ಹಿತ ಆದರೆ ಕಜ್ಜಾಯ ಪ್ರಬಲವಾದ ವಿಷದಿಂದ ಮಾಡಿದ್ದು!

ಕೋಪಗೊಂಡ ಊರ್ವಶಿಯ ರೂಪ ‘ ಸುಮನೋಹರ ಭಯಂಕರ’!(ಎರಡೂ ಭಾವಗಳ ಸಮಾಗಮ)

ಅಪರೂಪದ ಕಾವ್ಯ ರಚನೆ! ಕುಮಾರವ್ಯಾಸ ಆಜ್ಞೆ ಮಾಡಿದೊಡನೆ ಸಾಲುಸಾಲಾಗಿ ಬಂದು ನಿಲ್ಲುವ ವಿರೋಧಾಭಾಸ ಹೋಲಿಕೆಗಳ ಸರಣಿ ಆಶ್ಚರ್ಯಗೊಳಿಸುವುದಿಲ್ಲವೇ?


ಕುಮಾರವ್ಯಾಸ ಪ್ರತಿಷ್ಠಾನ
೧೫/೨/೨೦೧೭

Monday, February 6, 2017



ಐಸಲೇ ಕುಮಾರವ್ಯಾಸ!                           -೭೨-
ಅರಣ್ಯ ಪ ೮-೧೩
ಅಸಂಖ್ಯಾತ ಸೇವಕಿಯರ ಓಲೈಕೆಗಳೊಂದಿಗೆ ಊರ್ವಶಿ ಅರ್ಜುನನ ಗೃಹವನ್ನು ಹೊಕ್ಕು ನಿದ್ರಿಸುತ್ತಿದ್ದ ಅವನನ್ನು ಎವೆಯಿಕ್ಕದೆ ನಿಟ್ಟಿಸುತ್ತಾ ನಿಂತಳು. ಅವಳ ಉಪಸ್ಥಿತಿಯಿಂದ ಹರಡಿದ ಪರಿಮಳ ಅರ್ಜುನನನ್ನು ಎಚ್ಚರಗೊಳಿಸಿತು.ಎದ್ದ ಅರ್ಜುನನಿಗೆ ಆಶ್ಚರ್ಯ, ಸಂಭ್ರಮ!
ಇಂದ್ರಸಭೆಯಲ್ಲಿ ಅಪೂರ್ವ ನರ್ತನ ಮಾಡಿದ ಅದ್ಭುತ ಕಲಾವಿದೆ! ಸುರೇಂದ್ರನ ಆಸ್ಥಾನದ ಸ್ತ್ರೀ, ಮೇಲಾಗಿ ತನ್ನ ಶಶಿವಂಶದ ಜನನಿಯೂ ಹೌದು. ನಮಸ್ಕರಿಸಿದ.ನಾನು ನಿಮ್ಮ ಮಗನಂತೆ. ಏನು ಆಜ್ಞೆ ಹೇಳಿ ಎಂದ.

ಇಂದ್ರನ ನೇಮದಂತೆ ಶೃಂಗಾರ ಭಾವನೆಗಳನ್ನು ಹೊಂದಿದ್ದ ಊರ್ವಶಿಗೆ ದಿಗ್ಭ್ರಮೆ! ಇವನೇನು ಹುಚ್ಚನೋ,ನಪುಂಸಕನೊ?.ದೇವತೆಗಳು,ದಾನವರು ಅಷ್ಟೇ ಏಕೆ ಅಪರಿಮಿತ ಸಾಧನೆ ಮಾಡಿ ಸ್ವರ್ಗವನ್ನು ಪಡೆದ ತಪಸ್ವಿಗಳು ಒಂದು ದೃಷ್ಟಿಗಾಗಿ ಹಂಬಲಿಸುವ ತನ್ನನ್ನು ತಾಯಿಯಂತೆ ಅತಿ ಗೌರವ ತೋರುತ್ತಿದ್ದಾನೆ ಅವಿವೇಕಿ!

ಅರ್ಜುನ ಹೇಳಿದ;’ನಮ್ಮ ವಂಶದ ಪೂರ್ವಜ ಪುರೂರವನ ಸತಿ ನೀನು. ನಿನ್ನಿಂದ ಆಯು ಜನಿಸಿದ ಅವನ ಮಗ ನಮ್ಮ ಪೂರ್ವಜ ನಹುಷ. ನಾನು ನಿನಗೆ ಕಂದನೇ’ 
 ಊರ್ವಶಿ ನಗುತ್ತಾ ಹೇಳಿದಳುಃ

‘ಅಯ್ಯನಯ್ಯನು,ನಿಮ್ಮವರ ಮುತ್ತಯ್ಯ
ಆತನ ಭಾವ ಮೈದುನನಯ್ಯನು,
ಅಗ್ರಜರನುಜರೆಂಬೀ ಜ್ಞಾತಿಬಾಂಧವರ
ಕೈಯಲರಿಗಳ ಹೊಯ್ದು ಶಿರನರಿದುಯ್ಯಲಾಡಿದವರ್ಗೆ
ಮೇಣ್ ಮಖದಯ್ಯಗಳಿಗೆ
ಆನೊಬ್ಬಳೆಂದಳು ನಗುತ ನಳಿನಾಕ್ಷಿ..,’

(ಮಖ=ಯಜ್ಞ; ಮಖದಯ್ಯ-ಯಜ್ಞ ಮಾಡಿ ಸ್ವರ್ಗ ಪಡೆದವರು)

‘ಅಪ್ಪ, ಅವನಪ್ಪ, ಅಜ್ಜ್ಜ,ಮುತ್ತಜ್ಜ,ಅಣ್ಣ, ತಮ್ಮ, ಭಾವ, ಮೈದುನ ಮುಂತಾದ ನಿಮ್ಮ ಭೂಲೋಕದ ಸಂಬಂಧಿಕರಿಗೆ, ಯುದ್ಧದಲ್ಲಿ ಶತ್ರುಗಳನ್ನು ಸಂಹಾರಮಾಡಿ ವೀರಸ್ವರ್ಗ ಪಡೆದವರಿಗೆ, ಯಾಗ ಯಜ್ಞ ಮಾಡಿ ಇಲ್ಲಿಗೆ ಬಂದವರಿಗೆಲ್ಲಾ ಇಲ್ಲಿ ದೊರೆಯುವ ಸುಖದ ಕೊಡುಗೆ ತಾನೊಬ್ಬಳೇ,ತಿಳಿಯಿತೇನು?

ಅರ್ಜುನ ಮುಂದಿಟ್ಟ ಭೂಲೋಕದ ಸಂಬಂಧಗಳ ನಂಬುಗೆಗಳನ್ನು ಹಂಗಿಸುತ್ತಿದ್ದಾಳೆ ಊರ್ವಶಿ. ‘ಎಲ್ಲ ಸಂಬಂಧಗಳೂ ನಿಮ್ಮ ಲೋಕಕ್ಕಷ್ಟೇ ಸೀಮಿತ. ಇಂದ್ರಲೋಕಕ್ಕಲ್ಲ. ಇಲ್ಲಿಯ ಕಟ್ಟುಪಾಡುಗಳೇ ಬೇರೆ!
ನಾನೂ ಸಹಾ ನಿನ್ನನ್ನು ಮನಸಾರೆ ಬಯಸಿ ಬಂದವಳು.ಇಲ್ಲಿಗೆ ಬರುವವರು ಸುಖ ಪಿಪಾಸುಗಳು. ಮೂರ್ಖನಂತೆ ಮಾತಾಡಬೇಡ’  ಅಷ್ಟೇ ಅಲ್ಲ ‘ಮಾನಿನಿಯರ ಇಚ್ಛೆಯನರಿಯದವ ಸುರೇಂದ್ರನಾಗಲಿ, ಚಂದ್ರನಾಗಲಿ, ಕುರಿ ಕಣಾ’

ಅರ್ಜುನನ ಶೀತಲ ನಡವಳಿಕೆಯಿಂದ ಊರ್ವಶಿಯ ಶೃಂಗಾರ ಭಾವ ಕ್ರೋಧಕ್ಕೆ ತಿರುಗುತ್ತದೆ. ಕೋಮಲತೆಯ ಸೌಂದರ್ಯ ಕರ್ಕಶತೆಯತ್ತ ವಾಲುತ್ತದೆ. ಸುರೇಂದ್ರನಾದರೂ ಸರಿ ಹೆಣ್ಣನ್ನು ಅವಗಣಿಸಿದರೆ ಕುರಿಯಂತೆ ಎನ್ನಲೂ ಹೇಸುವುದಿಲ್ಲ.

ಊರ್ವಶಿಯಲ್ಲಿನ ಭಾವ ಪರಿವರ್ತನೆಯ ಹಂತಗಳನ್ನು ಎಳೆ ಎಳೆಯಾಗಿ ಬಿಡಿಸುತ್ತಾನೆ ಕುಮಾರವ್ಯಾಸ.ಸಂಬಂಧಗಳ ಬಗ್ಗೆ ಪದ್ಯದಲ್ಲಿರುವ ವ್ಯಂಗ್ಯ,ಅದಕ್ಕಾಗಿ ಬಳಸಿದ ದೇಸಿ ಕನ್ನಡದ ಶಬ್ದಗಳನ್ನು ಗಮನಿಸಿ.

ಕುಮಾರವ್ಯಾಸ ಪ್ರತಿಷ್ಠಾನ
೫/೨/೨೦೧೭

Tuesday, January 31, 2017



ಐಸಲೇ ಕುಮಾರವ್ಯಾಸ!                           -೭೧-
ಅರಣ್ಯ ಪ ೮-೧೩

ವನವಾಸದ ಅವಧಿಯಲ್ಲಿ ಹರನನ್ನು ತಪಸ್ಸಿನಿಂದ ಮೆಚ್ಚಿಸಿ ಪಾಶುಪತಾಸ್ತ್ರವನ್ನು ಅರ್ಜುನ ಪಡೆದ. ನಂತರ ಇಂದ್ರಾದಿ ಎಲ್ಲಾ ದಿಕ್ಪಾಲಕರೂ ಬಂದು ಅರ್ಜುನನನ್ನು ಅಭಿನಂದಿಸಿದರು.

ಇಂದ್ರ ಮಗನನ್ನು ಹರಸಿ ಹೇಳಿದ, ‘ತಪಸ್ಸಿನಿಂದ ದೇಹವನ್ನು ದಂಡಿಸಿದ್ದೀಯೆ. ಸಾರಥಿಯಾದ ಮಾತಲಿಯನ್ನು ರಥಸಹಿತ ಕಳಿಸುತ್ತೇನೆ. ಕೆಲದಿನ ಅಮರಾವತಿಯಲ್ಲಿ ವಿಶ್ರಮಿಸು’.ಅರ್ಜುನ ಒಪ್ಪಿದ.

ಅಮರಾವತಿಗೆ ಆಗಮಿಸಿದ  ಮಗ ಅರ್ಜುನನನ್ನು ಇಂದ್ರ ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡು ಗಾನ, ನರ್ತನಾದಿಗಳನ್ನು ಏರ್ಪಡಿಸಿದ. ನರ್ತಿಸುತ್ತಿದ್ದ ದೇವಸುಂದರಿ ಊರ್ವಶಿಯನ್ನು ಅರ್ಜುನ ಎವೆಯಿಕ್ಕದೆ ನೋಡುತ್ತಿದ್ದುದನ್ನು ಇಂದ್ರ ಗಮನಿಸಿ, ಊರ್ವಶಿಗೆ ಸಂದೇಶ ಕಳಿಸಿದ.

ಅತ್ಯಂತ ಸುಂದರನಾದ ಅರ್ಜುನನನ್ನು ಊರ್ವಶಿ ಮೋಹಿಸಿದ್ದಳು ಕೂಡ.ಇಂದ್ರನ ಆಣತಿ ಸಿಕ್ಕಿದಮೇಲೆ ಮಾತೇನು? ಕವಿ ಹೇಳುತ್ತಾನೆ ‘ನಾರಾಯಣನ ಮೈದುನನ ಬರೆದಳು ಚಿತ್ತ ಭಿತ್ತಿಯಲಿ (ಮನಸ್ಸಿನಲ್ಲೇ ಅರ್ಜುನನನ್ನು ಮೋಹಿಸಿದಳು)

ಸಾಲಂಕೃತಳಾಗಿ ಅರ್ಜುನನಿದ್ದ ಅರಮನೆಗೆ ಬಂದ ಊರ್ವಶಿಯನ್ನು ಕವಿ ವರ್ಣಿಸುತ್ತಾನೆ

‘ಬಂದಳೂರ್ವಶಿ,
ಬಳ್ಳಿ ಮಿಂಚಿನ ಮಂದಿಯಲಿ ಮುರಿದಿಳಿವ
ಮರಿಮುಗಿಲಂದದಲಿ,
ದಂಡಿಗೆಯನಿಳಿದಳು ರಾಜ ಭವನದಲಿ,
ಮುಂದೆ ಪಾಯವಧಾರು ಸತಿಯರ ಸಂದಣಿಯ
ಸಿಂಜಾರವದ ಸೊಗಸಿಂದ ಶಬ್ದ ಬ್ರಹ್ಮ ಸೋತುದು ಸೊರಹಲೇನೆಂದ..’

(ಮರಿಮುಗಿಲು- ಪುಟ್ಟ ಮೋಡ; ದಂಡಿಗೆ- ಪಲ್ಲಕ್ಕಿ;  ಪಾಯವಧಾರು-ನಡೆಮುಡಿ ಹಾಸುವ ಸಖಿಯರು; ಸಂದಣಿ-ಸಮೂಹ; ಸಿಂಜಾರವ-ಗೆಜ್ಜೆಯ ಶಬ್ದ)

ಫಳಫಳನೆ ಮಿಂಚುತ್ತಿರುವ ಮಿಂಚಿನ ಗೊಂಚಲುಗಳನ್ನು ಧರಿಸಿದ ಪುಟ್ಟ ಮೋಡವೊಂದು ಆಗಸದಿಂದ ಇಳಿಯುವಂತೆ ಊರ್ವಶಿ ಪಲ್ಲಕ್ಕಿಯಿಂದ ಇಳಿದಳು. ಅವಳ ಮುಂದೆ ‘ಪಾಯವಧಾರು’ ಎಂದು (ರಾಜರೇ ಮೊದಲಾದ ಪ್ರಮುಖ ವ್ಯಕ್ತಿಗಳಿಗೆ ಸಲ್ಲಿಸುವ ಗೌರವದ ಸೇವೆ) ಸೂಚಿಸುವ ಹೆಂಗಳೆಯರ ನೂಪುರದ ಧ್ವನಿಯಿಂದ ಶಬ್ದಬ್ರಹ್ಮವೇ ಸೋತು ಹೋಯಿತು. ನಾನು ಒಣ ಶಬ್ದದಿಂದ ಏನು ಹೇಳಲಿ?

ದೇವಲೋಕದ ಪರಮಸುಂದರಿ ಊರ್ವಶಿ.ಮಿಂಚುವ ಆಭರಣಗಳು!ವಿಶೇಷವಾದ ಅಲಂಕಾರ ಬೇರೆ.ಪಲ್ಲಕ್ಕಿಯಿಂದ ಇಳಿದವಳಿಗೆ ಹೋಲಿಕೆ ಮಿಂಚುಗಳಿಂದ ತುಂಬಿದ ಮರಿಮುಗಿಲು.

ಅವಳಿಗೆ ಸೇವೆ ಮಾಡುವ ದಾಸಿಯರ ಲೆಕ್ಕವಿಲ್ಲ. ಅವರ ಕಾಲ್ಗೆಜ್ಜೆಯ ಧ್ವನಿ ಶಬ್ದಬ್ರಹ್ಮನನ್ನು ಸೋಲಿಸಿತೆಂದ ಮೇಲೆ?.ಊರ್ವಶಿಯ ಆಗಮನದ ಭವ್ಯತೆಯನ್ನು ಒಂದೇ ಪದ್ಯದಲ್ಲಿ ಸುಂದರವಾಗಿ ಕಟ್ಟಿ ಕೊಡುತ್ತಾನೆ ಕವಿ!

ಗಮನಿಸಿ,ದೇವಸುಂದರಿಯನ್ನು ವರ್ಣಿಸುತ್ತಿರುವ ಭಾಷೆ ಬಹುತೇಕ ದೇಸೀ ಕನ್ನಡ! ಎಲ್ಲಕ್ಕೂ ಸಂಸ್ಕೃತ ಬೇಕೆಂದಿಲ್ಲ. ಭಾಷೆಯನ್ನು ದುಡಿಸಬಲ್ಲ ಸಮರ್ಥ ಕವಿಗೆ ಇದು ಸಾಧ್ಯ.

ಕುಮಾರವ್ಯಾಸ ಪ್ರತಿಷ್ಠಾನ
೩೧/೧/೨೧೦೭